ಚೆನ್ನೈ: ಹತ್ಯೆಗೀಡಾದ ತಮಿಳುನಾಡು ಬಿಎಸ್ ಪಿ ಅಧ್ಯಕ್ಷ ಕೆ ಆರ್ಮ್‌ಸ್ಟ್ರಾಂಗ್ ಅವರ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಪಕ್ಷದ ವರಿಷ್ಠೆ ಮಾಯಾವತಿ ಒತ್ತಾಯಿಸಿದ್ದಾರೆ.
ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಬಂಧಿಸಲ್ಪಟ್ಟವರು ನಿಜವಾದ ಅಪರಾಧಿಗಳಲ್ಲ ಎಂದು ಪ್ರತಿಪಾದಿಸಿರುವ ಮಾಯಾವತಿ, ಮೃತರ ಕುಟುಂಬಸ್ಥರಿಗೆ ನ್ಯಾಯ ಒದಗಿಸಲು ತನಿಖೆಯನ್ನು ಕೇಂದ್ರ ಏಜೆನ್ಸಿಗೆ ವರ್ಗಾಯಿಸಬೇಕೆಂದು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರನ್ನು ಒತ್ತಾಯಿಸಿದರು.
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರು ಇಲ್ಲಿ ಆರ್ಮ್‌ಸ್ಟ್ರಾಂಗ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಬಂದಿದ್ದರು. ಪೆರಂಬೂರ್‌ನಲ್ಲಿರುವ ಖಾಸಗಿ ಶಾಲೆಯೊಂದರಲ್ಲಿ 52 ವರ್ಷದ ನಾಯಕನ ಪಾರ್ಥಿವ ಶರೀರಕ್ಕೆ ಪುಷ್ಪಾರ್ಚನೆ ಮಾಡಿದರು.
ಆರ್ಮ್‌ಸ್ಟ್ರಾಂಗ್‌ನ ಸಾವಿನ ಬಗ್ಗೆ ದುಃಖ ವ್ಯಕ್ತಪಡಿಸಿದ ಅವರು, ದಾಳಿಕೋರರಿಂದ ಹತ್ಯೆಗೀಡಾಗಿದ್ದು ನೋಡಿದರೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಗೊತ್ತಾಗುತ್ತದೆ. ಸಿಎಂ ಸ್ಟಾಲಿನ್ ಅವರು ಆರ್ಮ್‌ಸ್ಟ್ರಾಂಗ್ ಸಾವಿಗೆ ನ್ಯಾಯ ಒದಗಿಸಬೇಕು, ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ ವರ್ಗಾಯಿಸಬೇಕು ಎಂದು ಒತ್ತಾಯಿಸಿದರು.
ಪ್ರಕರಣಕ್ಕೆ ಸಂಬಂಧಿಸಿ ನಿಜವಾದ ಆರೋಪಿಗಳನ್ನು ಬಂಧಿಸಲಾಗಿಲ್ಲ, ತನಿಖೆಯನ್ನು ಸಿಬಿಐಗೆ ವರ್ಗಾಯಿಸಿ, ರಾಜ್ಯ ಸರ್ಕಾರ ನ್ಯಾಯವನ್ನು ಖಾತರಿಪಡಿಸುತ್ತದೆ ಎಂಬ ಭರವಸೆ ನಮಗಿಲ್ಲ. ಆದ್ದರಿಂದ, ಪ್ರಕರಣವನ್ನು ತಕ್ಷಣವೇ ಸಿಬಿಐಗೆ ವರ್ಗಾಯಿಸಿ ಎಂದು ಒತ್ತಾಯಿಸಿದರು.