ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ-2024ರ ಪ್ರಮುಖ ಆಕರ್ಷಣೆ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಕಾಡಿನಿಂದ ನಾಡಿಗೆ ಆಗಮಿಸಿ ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ದಸರಾ ಗಜಪಡೆಗಳಿಗೆ ಇಂದು ಅಂತಿಮ ಹಂತದ ತೂಕ ಪರೀಕ್ಷೆ ನಡೆಸಲಾಯಿತು.
ನಗರದ ದೇವರಾಜ ಮೊಹಲ್ಲಾದ ಧನ್ವಂತರಿ ರಸ್ತೆಯಲ್ಲಿರುವ ಸಾಯಿರಾಂ ಅಂಡ್ ಕೊ ತೂಕಮಾಪನ ಕೇಂದ್ರದಲ್ಲಿ ದಸರಾ ಗಜಪಡೆಯ 14 ಆನೆಗಳ ಅಂತಿಮ ಹಂತದ ತೂಕ ಪರಿಶೀಲನೆ ನಡೆಸಲಾಯಿತು. ತೂಕದಲ್ಲಿ ಕ್ಯಾಪ್ಟನ್ ಅಭಿಮನ್ಯು ಅಗ್ರಸ್ಥಾನ ಪಡೆದುಕೊಂಡಿದ್ದು, ಈ ಬಾರಿ 5820 ಕೆಜಿ ತೂಕ ಹೊಂದಿದ್ದಾನೆ. ಒಂದು ತಿಂಗಳ ಅಂತರದಲ್ಲಿ ಈ ಬಾರಿ 260 ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾನೆ. ಕಳೆದ ಬಾರಿ ಅಭಿಮನ್ಯು 5560 ಕೆಜಿ ತೂಕ ಹೊಂದಿದ್ದನು.
ತೂಕ ಪರೀಕ್ಷೆಯಲ್ಲಿ ಭಾಗಿಯಾದ 14 ಆನೆಗಳ ತೂಕ ಈ ಕೆಳಕಂಡಂತಿದೆ.
ಅಭಿಮನ್ಯು : 5820 ಕೆಜಿ
ಲಕ್ಷ್ಮಿ :2625 ಕೆಜಿ
ಭೀಮ :5380 ಕೆಜಿ
ಏಕಲವ್ಯ :5095 ಕೆಜಿ
ರೋಹಿತ :3930 ಕೆಜಿ
ದೊಡ್ಡ ಹರವೆ ಲಕ್ಷ್ಮಿ :3570 ಕೆಜಿ
ಕಂಜನ್ :4725 ಕೆಜಿ
ಪ್ರಶಾಂತ :5240 ಕೆಜಿ
ಸುಗ್ರೀವ :5540 ಕೆಜಿ
ಗೋಪಿ :5280 ಕೆಜಿ
ವರಲಕ್ಷ್ಮಿ :3555 ಕೆಜಿ
ಮಹೇಂದ್ರ 5150 ಕೆಜಿ
ಹಿರಣ್ಯ. 3160 ಕೆಜಿ
ಧನಂಜಯ. 5255 ಕೆಜಿ
ಈ ಕುರಿತು ಡಿಸಿಎಫ್ ಡಾ ಪ್ರಭುಗೌಡ ಮಾತನಾಡಿ, 14 ಆನೆಗಳಿಗೆ ಇಂದು ತೂಕ ಪರೀಕ್ಷೆ ನಡೆಸಲಾಗಿದೆ. ಎಲ್ಲಾ ಆನೆಗಳು ತೂಕವನ್ನ ಹೆಚ್ಚಳ ಮಾಡಿಕೊಳ್ಳಲಾಗಿದೆ. ಭೀಮ ಎಲ್ಲಾ ಆನೆಗಳಿಗಿಂತ ತೂಕವನ್ನ ಹೆಚ್ಚಿಸಿಕೊಂಡಿದ್ದಾನೆ. ಅಭಿಮನ್ಯು ತೂಕದಲ್ಲಿ ಮೊದಲ ಸ್ಥಾನ ಪಡೆದಿದ್ದಾನೆ. ಆನೆಗಳ ಆರೋಗ್ಯ ಕೂಡ ಉತ್ತಮವಾಗಿದೆ. ಜಂಬೂಸವಾರಿಯಲ್ಲಿ ಭಾಗಿಯಾಗಲಿಕ್ಕೆ ಎಲ್ಲಾ ಆನೆಗಳು ಸಿದ್ದಗೊಂಡಿವೆ ಎಂದು ತಿಳಿಸಿದರು.