ಮೈಸೂರು: ವಾಲ್ಮೀಕಿ ನಿಗಮದ ಹಗರಣದಲ್ಲಿ ಹಣಕಾಸು ಇಲಾಖೆಯ ನಂಟು ಸ್ಪಷ್ಟವಾಗಿದ್ದು, ಹಣಕಾಸು ಮಂತ್ರಿಯೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಬೇಕು ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ ಆಗ್ರಹಿಸಿದರು.
ವಾಲ್ಮೀಕಿ ನಿಗಮದ ಒಂದು ಬ್ಯಾಂಕ್ ಖಾತೆಯಿಂದ ಇನ್ನೊಂದು ಖಾತೆಗೆ ಕೋಟ್ಯಂತರ ರೂಪಾಯಿ ಹಣ ಅಕ್ರಮವಾಗಿ ವರ್ಗಾವಣೆ ಆಗಿದೆ. ಸಿದ್ದರಾಮಯ್ಯ ಅವರೇ ಹಣಕಾಸು ಸಚಿವರು. ಅವರ ಅನುಮತಿ ಇಲ್ಲದೆಯೇ ವರ್ಗಾವಣೆ ಸಾಧ್ಯವೇ’ ಎಂದು ಅವರು ಪ್ರಶ್ನಿಸಿದರು.
ಈ ಹಿಂದೆ ಟೆಲಿಫೋನ್ ಕದ್ದಾಲಿಕೆ, ರೇವಜಿತು ಹಗರಣ ಪ್ರಕರಣದಲ್ಲಿ ರಾಮಕೃಷ್ಣ ಹೆಗಡೆ, ಕ್ಲಾಸಿಕ್ ಕಂಪ್ಯೂಟರ್ ಪ್ರಕರಣದಲ್ಲಿ ಎಸ್. ಬಂಗಾರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಸಮಾಜವಾದಿ ಹಿನ್ನೆಲೆಯಿಂದ ಬಂದಿರುವ ಸಿದ್ದರಾಮಯ್ಯ ಸಹ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು. ಆರೋಪ ಮುಕ್ತರಾದಲ್ಲಿ ಮತ್ತೆ ಮುಖ್ಯಮಂತ್ರಿ ಆಗಲಿ ಎಂದರು.
ಸಿಬಿಐ ತನಿಖೆಗೆ ಒತ್ತಾಯ: `ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಮ್ಮ ಅವರಿಗೆ ೫೦:೫೦ ಅನುಪಾತದಲ್ಲಿ ನಿವೇಶನ ಕೊಟ್ಟಿರುವುದು ತಪ್ಪಲ್ಲ. ಆದರೆ ಅಧಿಕಾರಿಗಳು ಸಮಾನಾಂತರ ಬಡಾವಣೆಯಲ್ಲಿ ನಿವೇಶನ ನೀಡಬೇಕಿತ್ತು. ಡಿನೋಟಿಫೈ ಮಾಡಲು ಪ್ರಭಾವ, ಜಮೀನಿನ ಅಕ್ರಮ ನೋಂದಣಿ ವಿಚಾರ ನಿಜವೇ ಆಗಿದ್ದಲ್ಲಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಮುಡಾದಲ್ಲಿ ನಿವೇಶನಗಳ ಅಕ್ರಮ ಹಂಚಿಕೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು’ ಎಂದು ಒತ್ತಾಯಿಸಿದರು.