Monday, May 5, 2025
Google search engine

Homeರಾಜ್ಯನಂದಿ, ಭೀಮಾ, ಕೃಷ್ಣಾ ಸಕ್ಕರೆ ಕಾರ್ಖಾನೆಗಳಿಗೆ ಹಣಕಾಸು ನೆರವು: ಸಚಿವ ಎಂ.ಬಿ ಪಾಟೀಲ್

ನಂದಿ, ಭೀಮಾ, ಕೃಷ್ಣಾ ಸಕ್ಕರೆ ಕಾರ್ಖಾನೆಗಳಿಗೆ ಹಣಕಾಸು ನೆರವು: ಸಚಿವ ಎಂ.ಬಿ ಪಾಟೀಲ್

ಬೆಂಗಳೂರು: ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನಲ್ಲಿರುವ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ, ವಿಜಯಪುರ ಜಿಲ್ಲೆ ಬಬಲೇಶ್ವರ ತಾಲ್ಲೂಕಿನ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಹಾಗೂ ಇಂಡಿ ತಾಲ್ಲೂಕಿನ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ಅಗತ್ಯವಿರುವ ಆರ್ಥಿಕ ನೆರವನ್ನು ಹೇಗೆ ಒದಗಿಸಬೇಕು ಎನ್ನುವ ಬಗ್ಗೆ ಸರಿಯಾದ ಯೋಜನೆ ರೂಪಿಸುವಂತೆ ಮುಖ್ಯಮಂತ್ರಿಯವರು ಹಣಕಾಸು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.

ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ಒದಗಿಸಬೇಕಾದ ನೆರವು ಕುರಿತು ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಅವರು ಭಾಗವಹಿಸಿದ್ದರು.

ಬಳಿಕ ಮಾತನಾಡಿದ ಸಚಿವರು, ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ಆರ್ಥಿಕ ನೆರವು ಬೇಕಾಗಿದೆ. ಅವಧಿ ಸಾಲ, ರೈತರಿಗೆ ಮಾಡಬೇಕಾದ ಹಣ ಪಾವತಿ, ಕಬ್ಬಿನ ಕಟಾವು, ಸಾಗಣೆ, ಸಕ್ಕರೆ ಮತ್ತು ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆ ವೆಚ್ಚಗಳ ಭಾರ ವಿಪರೀತವಾಗಿದೆ. ಈ ಕಾರ್ಖಾನೆಗಳಿಗೆ ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮ ಅಥವಾ ಬ್ಯಾಂಕ್ ಖಾತರಿ ಮೂಲಕ ಆರ್ಥಿಕ ಸಹಾಯ ದೊರಕಿಸಿ ಕೊಡಬೇಕೆಂದು ಸಭೆಯಲ್ಲಿ ಗಮನಕ್ಕೆ ತರಲಾಯಿತು. ಈ ಬಗ್ಗೆ ನಿಗಮದ ಜತೆಗೂ ಚರ್ಚಿಸಲು ಮುಖ್ಯಮಂತ್ರಿ ಸೂಚಿಸಿದ್ದಾರೆ ಎಂದರು.

ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಗೆ 192 ಕೋಟಿ ರೂಪಾಯಿ ಮತ್ತು ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಗೆ 150 ಕೋಟಿ ರೂಪಾಯಿ ಹಾಗೂ ಭೀಮಾ ಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಗೆ 130 ಕೋಟಿ ರೂಪಾಯಿ ಬೇಕಾಗಿದೆ. ಇಷ್ಟು ನೆರವು ದೊರಕಿಸಿ‌ ಕೊಟ್ಟರೆ, ವಿದ್ಯುತ್ ಉತ್ಪಾದನೆಯಿಂದ ಬರುವ ಹಣವನ್ನು ಸಾಲದ ಕಡೆಗೇ ಪಾವತಿಸಲು ಕಾರ್ಖಾನೆಗಳು ಆಸಕ್ತಿ ಹೊಂದಿವೆ ಎಂದು ಅವರು ನುಡಿದಿದ್ದಾರೆ.

ಕೃಷ್ಣಾ ಕಾರ್ಖಾನೆಯು 27 ಮೆಗಾವ್ಯಾಟ್ ಮತ್ತು ನಂದಿ ಕಾರ್ಖಾನೆಯು 37 ಮೆಗಾವ್ಯಾಟ್ ಸಾಮರ್ಥ್ಯದ ಸಹವಿದ್ಯುತ್ (ಕೋಜೆನ್) ಘಟಕ ಸ್ಥಾಪಿಸುವ ಆಸಕ್ತಿ ಹೊಂದಿವೆ. ಜೊತೆಗೆ ಕೃಷ್ಣಾ ಹಾಗೂ ಭೀಮಾ ಕಾರ್ಖಾನೆಯು ಎಥೆನಾಲ್ ಉತ್ಪಾದನಾ ಘಟಕವನ್ನೂ ಸ್ಥಾಪಿಸಲು ಮುಂದಾಗಿದೆ. ಸಹಕಾರಿ ತತ್ತ್ವದ ಮೇಲೆ ನಡೆಯುತ್ತಿರುವ ಈ ಕಾರ್ಖಾನೆಗಳ ಪುನಶ್ಚೇತನ ಸಮರ್ಪಕವಾಗಿ ನಡೆಯಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಈ ಸಂಬಂಧ ಸಕ್ಕರೆ ಆಯುಕ್ತರು ಮತ್ತು ಎನ್.ಸಿ.ಡಿ.ಸಿ. ಅಧಿಕಾರಿಗಳ ಜತೆ ಸಮಗ್ರವಾಗಿ ಚರ್ಚಿಸಿ, ಸಮರ್ಪಕ ಪರಿಹಾರ ಕಂಡುಕೊಳ್ಳಲು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಈ ಎರಡೂ ಕಾರ್ಖಾನೆಗಳಿಗೆ ಸರಕಾರದ ಕಡೆಯಿಂದ ಸಕಾಲಿಕ ನೆರವು ಸಿಗುವಂತೆ ಮಾಡಲು ಎಲ್ಲ ಪ್ರಯತ್ನಗಳನ್ನೂ ಮಾಡಲಾಗುವುದು ಎಂದು ಪಾಟೀಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಭೆಯಲ್ಲಿ ಸಚಿವರಾದ ಎಚ್ ಕೆ ಪಾಟೀಲ್, ಶಿವಾನಂದ ಪಾಟೀಲ್, ಎಚ್ ಸಿ ಮಹದೇವಪ್ಪ, ಇಂಡಿ ಶಾಸಕ ಯಶವಂತರಾಯ ಗೌಡ ಪಾಟೀಲ, ಬೀಳಗಿ ಶಾಸಕ ಜೆ ಟಿ ಪಾಟೀಲ, ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್ ಕೆ ಅತೀಕ್, ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತ, ಹಣಕಾಸು ಇಲಾಖೆಯ ಕಾರ್ಯದರ್ಶಿ ಪಿ ಸಿ ಜಾಫರ್, ನಂದಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಕುಮಾರ ದೇಸಾಯಿ ಜೈನಾಪುರ, ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ರಾಜಗೋಪಾಲ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular