ವರದಿ :ಸ್ಟೀಫನ್ ಜೇಮ್ಸ್.
ನಿಮ್ಮ ಕುರ್ಚಿ ಬಡಿದಾಟದಿಂದಾಗಿ ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಾಸಮರ ನಡೆಸಿದರು
ದಾವಣಗೆರೆ: ನಿಮ್ಮ ಕುರ್ಚಿ ಬಡಿದಾಟದಿಂದಾಗಿ ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ. ಬೆಳಗಾವಿ ಅಧಿವೇಶನಕ್ಕೂ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಅಧಿವೇಶನದಲ್ಲಿ ರಾಜ್ಯದ ಜ್ವಲಂತ ಸಮಸ್ಯೆಗಳಿಗೆ ಉತ್ತರ ಸಿಗುತ್ತದೆ ಎಂದು ಜನರು ಕಾಯುತ್ತಿದ್ದಾರೆ. ಆದರೆ ಸಿಎಂ ಕುರ್ಚಿ ಕದನ ಶುರುಮಾಡಿಕೊಂಡಿದ್ದಾರೆ. ಅಧಿವೇಶನಕ್ಕೂ ಮುನ್ನವೇ ನಿಮ್ಮ ಕುರ್ಚಿ ಸಮಸ್ಯೆಗೆ ಪರಿಹಾರ ಕಂಡುಕೊಂಡು ಬನ್ನಿ. ಇಲ್ಲವಾದ್ರೆ ಅಧಿವೇಶನದಲ್ಲಿ ಜನರ ಸಮಸ್ಯೆಗೆ ಪರಿಹಾರ ಎಲ್ಲಿ ಸಿಗುತ್ತೆ?. ಅಧಿವೇಶನ ಮುಂದೂಡಿದರೂ ಪರವಾಗಿಲ್ಲ, ನಿಮ್ಮ ಕುರ್ಚಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ ಎಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಕಬ್ಬು, ಮೆಕ್ಕೆಜೋಳ ಬೆಳೆಗಾರರ ಸಮಸ್ಯೆಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ರಾಜ್ಯಾದ್ಯಂತ ಹೋರಾಟ ಮಾಡಿದರೂ ಕಿವಿಕೊಡುತ್ತಿಲ್ಲ. ಸರ್ಕಾರದ ವಿರುದ್ಧ ರೈತರ ಪರವಾಗಿ ಹೋರಾಟ ಮಾಡಲು ನಾವು ನಿರ್ಧಾರ ಮಾಡಿದ್ದೇವೆ. ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಇದೇ ತಿಂಗಳು 27, 28ಕ್ಕೆ ಹೋರಾಟ ಮಾಡಲು ಸಿದ್ಧರಾಗಿದ್ದೇವೆ. ಡಿಸೆಂಬರ್ 1ರಂದು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಹೋರಾಟ ನಡೆಸಲಿದ್ದೇವೆ. ಇಂದು ದಾವಣಗೆರೆಯಲ್ಲಿ ಹೋರಾಟಕ್ಕೆ ಚಾಲನೆ ನೀಡುತ್ತಿದ್ದೇವೆ ಎಂದು ಹೇಳಿದರು.
ಇಡೀ ಮಂತ್ರಿ ಮಂಡಲ ದೆಹಲಿಯಲ್ಲಿ ಕೂತಿದ್ದಾರೆ. ಕಬ್ಬು ಬೆಳೆಗಾರರು ಹೋರಾಟ ನಡೆಸುವ ವೇಳೆ ಕೃಷಿ ಸಚಿವರು ದೆಹಲಿಯಲ್ಲಿ ಕೂತಿದ್ದರು. ರಾಜ್ಯದ ಮತದಾರರು ನಮ್ಮನ್ನು ವಿಪಕ್ಷದಲ್ಲಿ ಕೂರಿಸಿದ್ದಾರೆ. ನಮ್ಮ ಕರ್ತವ್ಯವನ್ನು ನಾವು ಮಾಡುತ್ತೇವೆ ಎಂದರು.
ದಲಿತ ಪರ, ಮಹಿಳೆಯರ ಪರ ಹೋರಾಟ ಆಗಿದೆ. ಹಿಂದೂ ಪರ ಹೋರಾಟವನ್ನೂ ನಾವು ಮಾಡುತ್ತೇವೆ. ಆದರೆ ಕುರ್ಚಿ ಕೊಡಿಸುವ ಹೋರಾಟ ಮಾಡುವುದಿಲ್ಲ. ಅಯೋಧ್ಯೆಯಲ್ಲಿ ಧರ್ಮ ಧ್ವಜದ ಸ್ಥಾಪನೆಯಾಗಿದೆ. ದೇಶದಲ್ಲೂ ಧರ್ಮ ರಾಜ್ಯ, ರಾಮ ರಾಜ್ಯ ನಿರ್ಮಾಣವಾಗಲು ವೇದಿಕೆ ನಿರ್ಮಾಣ ಆಗಿದೆ. ರಾಜ್ಯದಲ್ಲಿ ಅಧರ್ಮೀಯರು ನಾಶ ಆಗಲೇ ಬೇಕು, ಧರ್ಮ ಜಯಗಳಿಸಲೇ ಬೇಕು, ಇದು ಜಗದ ನಿಯಮ ಎಂದು ಸಿ.ಟಿ.ರವಿ ಹೇಳಿದರು.



