ಬೆಂಗಳೂರು: ಕೈಯಲ್ಲಿ ಲಾಂಗ್ ಹಿಡಿದುಕೊಂಡು ಪೋಸ್ ಕೊಟ್ಟು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ರೀಲ್ಸ್ ಅಪ್‌ಲೋಡ್ ಮಾಡಿದ ಬಿಗ್ ಬಾಸ್ ಕನ್ನಡ ಸೀಸನ್ ೧೦ ಸ್ಪರ್ಧಿ ವಿನಯ್ ಗೌಡ ಹಾಗೂ ಬಿಗ್ ಬಾಸ್ ಕನ್ನಡ ಸೀಸನ್ ೧೧ ಸ್ಪರ್ಧಿ ರಜತ್ ಕಿಶನ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಇಬ್ಬರ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಬಸವೇಶ್ವರ ನಗರ ಠಾಣೆಯಲ್ಲಿ ಪಿಎಸ್ ಐ ಭಾನು ಪ್ರಕಾಶ್ ನೀಡಿದ ದೂರಿನ ಅನ್ವಯ ಎಫ್‌ಐಆರ್ ದಾಖಲಾಗಿದೆ.
ರಜತ್ ಕಿಶನ್ ಮತ್ತು ವಿನಯ್ ಗೌಡ ಲಾಂಗ್ ಹಿಡಿದು ರೀಲ್ಸ್ ಮಾಡಿದ್ದು ಅವರ ಮೇಲೆ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಕೇಸ್ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾದ ವಿನಯ್ ಗೌಡ ಮತ್ತು ರಜತ್ ಕಿಶನ್ ಅವರನ್ನು ಬಸವೇಶ್ವರನಗರ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರೀಲ್ಸ್ ಮಾಡುವಾಗ ಲಾಂಗ್ ಹಿಡಿದಿದ್ದಕ್ಕಾಗಿ ಇಬ್ಬರಿಗೂ ಕಾನೂನಿನ ಸಂಕಷ್ಟ ಹೆಚ್ಚಾಗಿದೆ. ರಜತ್ ಕಿಶನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಹಂಚಿಕೊಂಡ ಒಂದು ರೀಲ್ಸ್ ವಿವಾದಕ್ಕೆ ಕಾರಣ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ರಜತ್ ಅವರು ಈ ರೀಲ್ಸ್ ಅಪ್‌ಲೋಡ್ ಮಾಡಿದ್ದರು. ಅದು ವೈರಲ್ ಆದ ಬಳಿಕ ಕೇಸ್ ದಾಖಲಾಗಿತ್ತು.
ಈ ಸಂಬಂಧ ವಿಚಾರಣೆಗೆ ಬರುವಂತೆ ಇಬ್ಬರಿಗೂ ನೋಟಿಸ್ ನೀಡಲಾಗಿತ್ತು. ಇದೀಗ ವಿಚಾರಣೆ ವೇಳೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.