ಬೆಂಗಳೂರು: ಬೆಂಗಳೂರು ನಗರದ ವಿಕ್ಟೋರಿಯಾ ಆಸ್ಪತ್ರೆಯ ಬರ್ನ್ಸ್ ಬ್ಲಾಕ್‌ನಲ್ಲಿ ಮಂಗಳವಾರ ಬೆಳಗಿನ ಜಾವ ಬೆಂಕಿ ಅವಘಡ ಸಂಭವಿಸಿದೆ. ಬೆಳಗ್ಗೆ 3 ಗಂಟೆಯ ಸುಮಾರಿಗೆ ಸೆಮಿನಾರ್ ಕೊಠಡಿಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದ್ದು, ತಕ್ಷಣವೇ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದೆ.
ರಿಜಿಸ್ಟರ್ ಬುಕ್, ಬೆಡ್ ಹಾಗೂ ಫ್ರಿಡ್ಜ್ ಸುಟ್ಟಿದ್ದು, ಗಾಯದ ವಿಭಾಗದ ಭೂಮಿಯೆಲ್ಲಾ ಬೆಂಕಿಯಿಂದ ಆವರಿತವಾಗಿದೆ. ತಕ್ಷಣವೇ 26 ರೋಗಿಗಳನ್ನು ಸ್ಥಳಾಂತರಿಸಲಾಯಿತು. ಇವರಲ್ಲಿ 14 ಪುರುಷರು, 5 ಮಹಿಳೆಯರು ಮತ್ತು 7 ಮಕ್ಕಳು ಸೇರಿದ್ದಾರೆ. ಐಸಿಯುನಲ್ಲಿ ಇದ್ದ 5 ರೋಗಿಗಳನ್ನೂ ಸುರಕ್ಷಿತವಾಗಿ ಶಿಫ್ಟ್ ಮಾಡಲಾಗಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲಾ ರೋಗಿಗಳನ್ನು ಎಚ್ ಬ್ಲಾಕ್‌ಗೆ ಸ್ಥಳಾಂತರಿಸಲಾಗಿದೆ. ಯಾವುದೇ ತೊಂದರೆ ಇಲ್ಲದೆ ಚಿಕಿತ್ಸೆ ಮುಂದುವರೆಯುತ್ತಿದೆ.
ಡಾ. ದಿವ್ಯಾ ನೇತೃತ್ವದ ರಾತ್ರಿಪಾಳಿ ಸಿಬ್ಬಂದಿ ಘಟನೆಯಲ್ಲಿ ಮಹತ್ವಪೂರ್ಣ ಪಾತ್ರವಹಿಸಿದ್ದರು. ಬೆಳಗ್ಗೆ 3:30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡ ಬಳಿಕ, ಡಾ. ದಿವ್ಯಾ ತಕ್ಷಣ “ಕೋಡ್ ರೆಡ್” ಅಲರ್ಟ್ ಘೋಷಿಸಿ ಸಿಬ್ಬಂದಿಯೊಂದಿಗೆ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಕೂಡಲೇ ಸೂಪರಿಂಟೆಂಡೆಂಟ್‌ಗಳಿಗೆ, ಅಗ್ನಿಶಾಮಕ ದಳಕ್ಕೆ ಹಾಗೂ ಪೊಲೀಸರಿಗೂ ಮಾಹಿತಿ ನೀಡಿ, ಸೂಕ್ತ ಕ್ರಮ ಕೈಗೊಂಡಿದ್ದಾರೆ.