ಯಳಂದೂರು : ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶದ ಬೈಲೂರು ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ಬುಧವಾರ ಬೆಂಕಿ ಕಾಣಿಸಿಕೊಂಡು ಸುಮಾರು 9 ಎಕರೆ ಪ್ರದೇಶ ಹಾನಿಗೊಳಗಾದ ಘಟನೆ ನಡೆದಿದೆ.
ಏಪ್ರಿಲ್ 8 ರಂದು ಮಧ್ಯಾಹ್ನ 2.15ರ ಸುಮಾರಿಗೆ ಹಾವಿನಮೂಲೆ ಗ್ರಾಮದ ಸಮೀಪದ ಕರಡಿಮುಟ್ಟಿನ ಸಿರೆಹಳ್ಳ ಅರಣ್ಯ ಪ್ರದೇಶದಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ಸ್ಥಳಕ್ಕೆ ಧಾವಿಸಿದ ಅರಣ್ಯ ಸಿಬ್ಬಂದಿ ಬೆಂಕಿಯನ್ನು ನಂದಿಸಿದರು. ನಂತರ ಸಂಜೆ 4.20ರ ಸುಮಾರಿಗೆ ಅದೇ ಗ್ರಾಮದ ಆನೆ ಮದ್ದಿನ ಕಾಡು ಪ್ರದೇಶದಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡಿದೆ.
ಬೇಸಿಗೆ ತಾಪಮಾನ ಹೆಚ್ಚಾಗಿರುವುದು, ಒಣ ಬಿದಿರು ಮತ್ತು ಲಂಟಾನಾ ಗಿಡಗಳು ಅಧಿಕವಾಗಿರುವುದು ಹಾಗೂ ಗಾಳಿ ವೇಗವಾಗಿ ಬೀಸಿದ ಪರಿಣಾಮ ಬೆಂಕಿ ತೀವ್ರವಾಗಿ ಹರಡಿದಂತೆ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಕಿ ಅವಘಡದಲ್ಲಿ ಒಟ್ಟು ಸುಮಾರು 9 ಎಕರೆ ಪ್ರದೇಶದ ಒಣ ಬಿದಿರು ಮತ್ತು ಲಂಟಾನಾ ಸುಟ್ಟುಹೋಗಿದೆ. ಹಾವಿನಮೂಲೆ ಗ್ರಾಮದಲ್ಲಿ ಸುಮಾರು 100 ಕುಟುಂಬಗಳು ವಾಸವಿದ್ದು, ಅವರಿಗೆ ಹಲವು ಬಾರಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದ್ದರೂ ಘಟನೆ ಸಂಭವಿಸಿದೆ.
ಮಾಹಿತಿ ದೊರಕುತ್ತಿದ್ದಂತೆಯೇ ಬೈಲೂರು ವನ್ಯಜೀವಿ ವಲಯದ ಅಧಿಕಾರಿಗಳು, ಸಿಬ್ಬಂದಿ ಮತ್ತು ಬೆಂಕಿ ವಾಚರ್‌ಗಳು ಸೇರಿ ಸುಮಾರು 30 ಮಂದಿ ತಕ್ಷಣ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಹಾಲಕ್ಷ್ಮೀ ಎಂ ಹಾಗೂ ವಲಯ ಅರಣ್ಯಾಧಿಕಾರಿ ಪ್ರಮೋದ್ ಎ. ಭೇಟಿ ನೀಡಿ ಮೇಲ್ವಿಚಾರಣೆ ನಡೆಸಿದರು.
ಈ ಸಂಬಂಧ ವನ್ಯಜೀವಿ ಅಪರಾಧ ವರದಿ ಸಂಖ್ಯೆ 01/2026-27 ದಾಖಲಿಸಲಾಗಿದ್ದು, ಬೆಂಕಿ ಹರಡಲು ಕಾರಣರಾದವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಅರಣ್ಯ ಇಲಾಖೆ ತಿಳಿಸಿದೆ.



