ಆನೇಕಲ್: ಅತ್ತಿಬೆಲೆ ಗಡಿಯ ಬಾಲಾಜಿ ಕ್ರ್ಯಾಕರ್ಸ್ ಪಟಾಕಿ ದಾಸ್ತಾನು ಮಳಿಗೆಯಲ್ಲಿ ಶನಿವಾರ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಸಾವಿಗೀಡಾದ ೧೨ ಜನರ ಕುಟುಂಬಗಳಿಗೆ ತಲಾ ೫ ಲಕ್ಷ ರೂಪಾಯಿ ಪರಿಹಾರವನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಿಸಿದ್ದಾರೆ. ನಿನ್ನೆ ರಾತ್ರಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅವರು, ಅಧಿಕಾರಿಗಳಿಂದ ಮಾಹಿತಿ ಪಡೆದು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಮೃತಪಟ್ಟ ಅಮಾಯಕ ಯುವಕರನ್ನು ಕಂಡರೆ ದುಃಖ ಉಮ್ಮಳಿಸಿ ಬರುತ್ತಿದೆ. ೧೯ ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎಂದು ಮಾಹಿತಿ ಸಿಕ್ಕಿದೆ. ೧೨ ಮಂದಿ ಸಜೀವ ದಹನವಾಗಿದ್ದಾರೆ. ಪಟಾಕಿ ದಾಸ್ತಾನಿಟ್ಟುಕೊಳ್ಳಲು ಪರವಾನಗಿ ನೀಡಿರಲಿಲ್ಲ. ಮಾರಾಟದ ಅಂಗಡಿಗೆ ಮಾತ್ರ ಅನುಮತಿ ಪಡೆಯಲಾಗಿತ್ತು. ಅಧಿಕಾರಿಗಳ ಕಣ್ಣು ತಪ್ಪಿಸಿ ಅಕ್ರಮ ದಾಸ್ತಾನಿಟ್ಟಿರುವುದೇ ಘಟನೆಗೆ ಕಾರಣ ಎಂದರು.
ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಅವರು ಮೃತರ ಕುಟುಂಬಸ್ಥರಿಗೆ ಪರಿಹಾರ ಘೋಷಿಸಿದ್ದಾರೆ. ಸಾವಿಗೀಡಾದ ಪ್ರತಿ ವ್ಯಕ್ತಿಯ ಕುಟುಂಬಸ್ಥರಿಗೆ ತಲಾ ೩ ಲಕ್ಷ ರೂಪಾಯಿ, ಗಂಭೀರವಾಗಿ ಗಾಯಗೊಂಡವರಿಗೆ ೧ ಲಕ್ಷ ಹಾಗು ಇತರೆ ಗಾಯಾಳುಗಳಿಗೆ ೫೦ ಸಾವಿರ ರೂಪಾಯಿ ಪರಿಹಾರವನ್ನು ಮುಖ್ಯಮಂತ್ರಿಗಳ ಸಾಮಾನ್ಯ ಪರಿಹಾರ ನಿಧಿಯಿಂದ ಪ್ರಕಟಿಸಿದ್ದಾರೆ.
ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲು ೧ ತಂಡ ರಚನೆಯಾದರೆ ಮತ್ತೊಂದು ತಂಡ ನುರಿತ ಪರಿಣತರಿಗೆ ಸಹಕರಿಸಿ ತನಿಖೆಗೆ ಸಹಕರಿಸಲು ನಿಯೋಜಿಸಲಾಗಿದೆ. ನವೀನ್, ರಾಜೇಶ್, ವೆಂಕಟೇಶ್ ಸೆಂಟ್ವಜಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವೆಂಕಟೇಶ್ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ. ಉಳಿದಂತೆ, ಅತ್ತಿಬೆಲೆ ಆಕ್ಸಫರ್ಡ್ ಆಸ್ಪತ್ರೆಯಲ್ಲಿ ಸಂಜಯ್, ಚಂದ್ರು, ರಾಜೇಶ್ ಮತ್ತು ಪಾಲ್ ಕಬೀರ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾರಾಟ ಮಳಿಗೆಯಲ್ಲಿರಬೇಕಾದ ಪಟಾಕಿ ಸಂಗ್ರಹಣಾ ಮಿತಿ ಹೆಚ್ಚಿದ್ದು ಅಕ್ರಮ ದಾಸ್ತಾನು, ನಿಯಮ ಉಲ್ಲಂಘನೆಯೇ ಘಟನೆಗೆ ಕಾರಣ ಎಂಬ ಮಾಹಿತಿ ದೊರೆತಿದೆ ಎಂದು ತಿಳಿಸಿದರು.
ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ್ ಮಾತನಾಡಿ, ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದಿದ್ದಾರೆ. ನಿಯಮಬಾಹಿರವಾಗಿ ಪರವಾನಗಿದಾರ ಐದಾರು ವರ್ಷಗಳಿಂದ ಪಟಾಕಿ ಅಂಗಡಿಯೊಂದಿಗೆ ಅಕ್ರಮ ದಾಸ್ತಾನಿಟ್ಟಿದ್ದಾನೆ. ಅಗ್ನಿಶಾಮಕದಳ, ಪೊಲೀಸ್, ಕಂದಾಯ, ಸ್ಥಳೀಯ ಆಡಳಿತದಿಂದಲೂ ಅನುಮತಿ ಪಡೆದು ನವೀಕರಣ ಮಾಡಿಸಿಕೊಂಡಿದ್ದಾರೆ. ಆದರೆ ಕಾರ್ಮಿಕರ ಸುರಕ್ಷತೆ ಹಾಗು ಮುನ್ನೆಚ್ಚರಿಕಾ ಕ್ರಮಗಳನ್ನು ಗಾಳಿಗೆ ತೂರಲಾಗಿತ್ತು ಎಂದರು.