ಮುಂಬೈ: ಮೋಟರ್ ಬೈಕ್‌ನಲ್ಲಿ ಬಂದಿದ್ದ ಇಬ್ಬರು ಅಪರಿಚಿತ ವ್ಯಕ್ತಿಗಳು ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನಿವಾಸದೆದುರು ಗುಂಡಿನ ದಾಳಿ ನಡೆಸಿದ್ದು, ಪೊಲೀಸರು ಅವರ ನಿವಾಸಕ್ಕೆ ಬಿಗಿ ಭದ್ರತೆ ಒದಗಿಸಿದ್ದಾರೆ. ಇದರ ಬೆನ್ನಿಗೇ ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಕೈಗೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಟ ಸಲ್ಮಾನ್ ಖಾನ್ ವಾಸಿಸುತ್ತಿರುವ ಮುಂಬೈನ ಬಾಂದ್ರಾ ಪ್ರದೇಶದ ಗ್ಯಾಲಕ್ಸಿ ಅಪಾರ್ಟ್ ಮೆಂಟ್ಸ್ ಬಳಿ ಇಂದು ಮುಂಜಾನೆ ೫ ಗಂಟೆಗೆ ನಾಲ್ಕು ಸುತ್ತಿನ ಗುಂಡಿನ ದಾಳಿ ನಡೆಸಿರುವ ಇಬ್ಬರು ಅಪರಿಚಿತ ವ್ಯಕ್ತಿಗಳು, ನಂತರ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ಘಟನೆಯ ನಂತರ, ಸಲ್ಮಾನ್ ಖಾನ್ ನಿವಾಸದೆದುರಿನ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ಗುಂಡಿನ ದಾಳಿ ನಡೆಸಿದ ವ್ಯಕ್ತಿಗಳ ಗುರುತನ್ನು ಪತ್ತೆ ಹಚ್ಚಲು ಅವರ ನಿವಾಸದ ಬಳಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾ ವಿಡಿಯೊ ತುಣುಕುಗಳನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು, ಅಪರಾಧ ವಿಭಾಗದ ಸಿಬ್ಬಂದಿಗಳು ಹಾಗೂ ವಿಧಿ ವಿಜ್ಞಾನ ತಜ್ಞರ ತಂಡವೊಂದು ಧಾವಿಸಿ ಸಾಕ್ಷ್ಯಾಧಾರಗಳನ್ನು ಕಲೆ ಹಾಕುತ್ತಿದ್ದು, ಘಟನೆಯ ಕುರಿತು ತನಿಖೆ ಪ್ರಾರಂಭಗೊಂಡಿದೆ ಎಂದು ಅವರು ತಿಳಿಸಿದ್ದಾರೆ.