Monday, February 9, 2026
Google search engine

Homeರಾಜ್ಯಮೊದಲಿಗೆ ಆರೋಗ್ಯದ ಗ್ಯಾರಂಟಿ ಕೊಡಿ ಆಮೇಲೆ ಉಳಿದ ಗ್ಯಾರಂಟಿ : ಸುಂದರ ಮಾಸ್ತರ್

ಮೊದಲಿಗೆ ಆರೋಗ್ಯದ ಗ್ಯಾರಂಟಿ ಕೊಡಿ ಆಮೇಲೆ ಉಳಿದ ಗ್ಯಾರಂಟಿ : ಸುಂದರ ಮಾಸ್ತರ್

ಉಡುಪಿ : ಅಸ್ಪೃಶ್ಯರಿಗೆ, ಬಡವರಿಗೆ, ಕೂಲಿ ಕಾರ್ಮಿಕರಿಗೆ ಮೊತ್ತ ಮೊದಲಿಗೆ ಆರೋಗ್ಯದ ಗ್ಯಾರಂಟಿ ಕೊಡಿ ಆಮೇಲೆ ಉಳಿದ ಗ್ಯಾರಂಟಿ. ಬಡವರು, ಅಸ್ಪೃಶ್ಯರು, ಕೂಲಿ ಕಾರ್ಮಿಕರು ಆರೋಗ್ಯದಿಂದ ಬದುಕುಳಿದರೆ ಮಾತ್ರ ನಿಮ್ಮ ಪಂಚ ಗ್ಯಾರಂಟಿ ಉಪಯೋಗಕ್ಕೆ ಬರುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್ ವಾದ, ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ತರ್ ಹೇಳಿದರು.

ಈ ವೇಳೆ ಇದೇ ಫೆಬ್ರವರಿ ೨ ರಿಂದ ೧೭ ರ ವರೆಗೆ ರಾಜ್ಯದ ವಿವಿಧ ಸಂಘಟನೆಗಳ ವತಿಯಿಂದ ನಡೆಯುವ ಆರೋಗ್ಯ ಹಕ್ಕಿನ ಜಾಥಾದ ಕುರಿತು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಎಲ್ಲಾ ಸರಕಾರಿ ಆಸ್ಪತ್ರೆಗಳನ್ನು ಖಾಸಗಿಯವರ ಸಹಭಾಗಿತ್ವಕ್ಕೆ ವಹಿಸುತ್ತಿದ್ದಾರೆ. ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲೂ ಸರಿಯಾದ ಔಷಧಿಗಳಿಲ್ಲಾ , ವೈದ್ಯರು ಹೊರಗಡೆ ಮೆಡಿಕಲ್ ಗೆ ಚೀಟಿ ಬರೆದು ಕೊಡುತ್ತಿದ್ದಾರೆ.

ಸರಕಾರಿ ಆಸ್ಪತ್ರೆಯನ್ನೇ ನಂಬಿಕೊಂಡಿರುವ ಅಸ್ಪೃಶ್ಯರು, ಬುಡಕಟ್ಟು ಸಮೂದಾಯದವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಾಗದೆ ಚಿಕ್ಕಪ್ರಾಯದಲ್ಲೇ ಅಸುನೀಗುತ್ತಿದ್ದಾರೆ. ಬಡವರು ಸರಕಾರಿ ಆಸ್ಪತ್ರೆಯಲ್ಲಿ ಸೂಕ್ತ ಔಷಧಿ, ಚಿಕಿತ್ಸೆ ಸಿಗದೆ ಪರದಾಡುವಂತಾಗಿದೆ, ಖಾಸಗೀ ಸಹಭಾಗಿತ್ವದ ಸರಕಾರಿ ಆಸ್ಪತ್ರೆಗಳು ದುಭಾರಿ ಚಿಕಿತ್ಸಾ ವೆಚ್ಚ ಹಾಕುವುದರಿಂದ ಬಡವರು ಸಂವಿಧಾನ ದತ್ತ ಆರೋಗ್ಯ ಹಕ್ಕಿನಿಂದ ವಂಚಿತರಾಗಿದ್ದಾರೆ ಎಂದರು.

ಮುಂದುವರೆದು, ಈ ಸರಕಾರಿ ಖಾಸಗೀ ಸಹಭಾಗಿತ್ವ ಕಾರ್ಯಕ್ರಮವನ್ನು ಕೂಡಲೇ ಕೈ ಬಿಡಬೇಕು?. ಈ PPP ವ್ಯವಸ್ಥೆಯನ್ನು ಈ ಕೂಡಲೇ ಕೈ ಬಿಡದಿದ್ದರೆ ಬಡವರು, ಕೂಲಿ ಕಾರ್ಮಿಕರು, ಬುಡಕಟ್ಟು ಸಮೂದಾಯದವರು, ಅಸ್ಪೃಶ್ಯರು ಮುಂದಿನ ಬಾರಿ ಇದೇ ಸರಕಾರ ಮುಂದುವರಿಯುವ ಗ್ಯಾರಂಟಿಯನ್ನು ಸಹ ನಿಲ್ಲಿಸಬೇಕಾಗಬಹುದು ಎಂದು ಆಕ್ರೋಶ ಹೊರಹಾಕಿದರು.

ಈ ಸರಕಾರಿ ಆಸ್ಪತ್ರೆಗಳ ಅನಾನುಕೂಲಗಳನ್ನು ವಿರೋಧಿಸಿ ರಾಜ್ಯಾಧ್ಯಂತ ನಡೆಯುವ ಪ್ರತಿಭಟನಾ ಜಾಥಾದಂತೆ ಉಡುಪಿಯಲ್ಲೂ ಸಹ ಇದೇ ತಾರೀಖು 10/02/2026 ರ ಮಂಗಳವಾರ ದಂದು ಕೊರಗ ಒಕ್ಕೂಟ ಮತ್ತು ಇತರ ಸಹಭಾಗೀ ಸಂಘಟನೆಯೊಂದಿಗೆ ʼಆರೋಗ್ಯ ಹಕ್ಕಿನ ಜಾಥಾʼ ಮಣಿಪಾಲ ಟೈಗರ್ ಸರ್ಕಲ್ ನಿಂದ ಜಿಲ್ಲಾಧಿಕಾರಿ ಕಛೇರಿ ವರೆಗೆ ನಡೆಯಲಿದೆ ಎಂದು ತಿಳಿಸಿದರು.

ಈ ಪ್ರತಿಭಟನಾ ಜಾಥಾದಲ್ಲಿ ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಬಡವರು, ಕೂಲಿ ಕಾರ್ಮಿಕರು, ಬುಡಕಟ್ಟು ಸಮೂದಾಯದವರು, ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಭಾಗವಹಿಸಬೇಕೆಂದು ಸುಂದರ ಮಾಸ್ತರ್ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್ ವಾದ ಇದರ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿಯವರು ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿಕೊಂಡರು.

RELATED ARTICLES
- Advertisment -
Google search engine

Most Popular