ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಕಣಗಾಲು ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘವು 2022-23ನೇ ಸಾಲಿನಲ್ಲಿ 5,33,151 ರೂ. ನಿವ್ವಳ ಲಾಭಗಳಿಸಿದೆ ಎಂದು ಮೈಮುಲ್ ವಿಸ್ತರಣಾಧಿಕಾರಿ ಕೆ.ಆರ್ ಆಕಾಶ್ ಮಾಹಿತಿ ನೀಡಿದರು.
ಸಂಘದ ಕಚೇರಿಯಲ್ಲಿ ಗುರುವಾರ ಆಯೋಜಿಸಿದ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಸಂಘದ ಅಭಿವೃದ್ಧಿಗೆ ಪ್ರತಿಯೊಬ್ಬ ಸದಸ್ಯರ ಸಹಕಾರ ಪ್ರಮುಖವಾಗಿದೆ. ಸಂಘವು ಉತ್ತಮ ಲಾಭಾಂಶ ಪಡೆದಿದ್ದು, ಮುಂಬರುವ ಹಬ್ಬದಲ್ಲಿ ಉತ್ಪಾದಕರಿಗೆ ಬೋನಸ್ ವಿತರಣೆ ಮಾಡಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಕಳೆದ ಬಾರಿ ಅತಿ ಹೆಚ್ಚು ಹಾಲು ಸರಬರಾಜು ಮಾಡಿದ ಉತ್ಪಾದಕರಿಗೆ ಬಹುಮಾನ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷೆ ರಾಧಾ, ನಿರ್ದೇಶಕರಾದ ಜಯಮ್ಮ, ಕಲ್ಪನಾ, ಲಾವಣ್ಯ, ಜ್ಯೋತಿ, ಗೌರಮ್ಮ, ಶಾರದಮ್ಮ, ಪರ್ವೀನ್, ಸಾವಿತ್ರಮ್ಮ, ಕಮಲಮ್ಮ, ಕಾರ್ಯದರ್ಶಿ ಕೆ.ಎಸ್ ಜ್ಞಾನವತಿ ಮಂಜುನಾಥ್, ಸಿಬ್ಬಂದಿಗಳಾದ ಶೋಭಾ ಹಾಗೂ ಸದಸ್ಯರು ಮತ್ತು ಗ್ರಾಮಸ್ಥರು ಇದ್ದರು.