ಮಂಡ್ಯ : ಮುತ್ತತ್ತಿಯ ಕಾವೇರಿ ನದಿಯಲ್ಲಿ ಜಲಸಮಾಧಿಯಾಗಿದ್ದ ಐವರ ಮರಣೋತ್ತರ ಪರೀಕ್ಷೆ ಮಂಡ್ಯದ ಮಿಮ್ಸ್ ಶವಾಗಾರದಲ್ಲಿ ನಡೆದಿದೆ. ಶವಾಗಾರದ ಬಳಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ತಮ್ಮವರನ್ನು ಕಳೆದುಕೊಂಡು ಗೋಳಾಡುತ್ತಿರುವ ದೃಶ್ಯ ಕರುಳು ಹಿಂಡುವಂತಿದೆ. ಇನ್ನು ಘಟನೆಯಲ್ಲಿ ಬದುಕುಳಿದಿರುವ ರವಿ ಏನಾಯ್ತು ಎಂಬುದನ್ನು ವಿವರಿಸಿದ್ದಾರೆ.
ಬೆಂಗಳೂರಿನಿಂದ ಕಬ್ಬಾಳಿಗೆ ಬಂದಿದ್ದ ನಾವು ಬೀಗರೂಟ ಮುಗಿಸಿ ತಾನೂ ಸೇರಿದಂತೆ 6 ಜನ ಕಾರಿನಲ್ಲಿ ಮುತ್ತತ್ತಿಗೆ ಹೋಗಿದ್ದೆವು. ನೀರಿನಲ್ಲಿ ಆಟವಾಡುವಾಗ ಅಕ್ಕ ವಿಜಯಮ್ಮ ಕಾಲು ಜಾರಿ ನೀರಿನಲ್ಲಿ ಮುಳುಗಿದ್ದಾರೆ. ಅವರನ್ನ ರಕ್ಷಿಸಲು ಪತ್ನಿ ಶ್ವೇತಾ, ಮಗಳು ಚೈತ್ರಾ, ಅಕ್ಕನ ಮಗಳು ಪ್ರಿಯಾಂಕಾ ಪ್ರಯತ್ನಿಸಿದ್ದಾರೆ. ಈ ವೇಳೆ ನೀರಿನಲ್ಲಿ ಮುಳುಗುತ್ತಿದ್ದ ಎಲ್ಲರನ್ನೂ ಕಾಪಾಡಲೆಂದು ನೀರಿಗಿಳಿದ ಕಾರು ಚಾಲಕ ಮತ್ತು ಸ್ನೇಹಿತನಾಗಿರುವ ಮಹೇಶ್ ಕೂಡ ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ರಕ್ಷಿಸಲು ಹೋಗಿ ನೀರಿಗೆ ಬಿದ್ದಿದ್ದ ತನ್ನನ್ನು ಸ್ಥಳೀಯರು ಕಾಪಾಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.



