ಮೈಸೂರು : ದೆಹಲಿ ರೈತ ಹೋರಾಟ ಬೆಂಬಲಿಸಿ ಮಾ.೧೨ರಂದು ರಾಜ್ಯಾದ್ಯಂತ ಪಂಜಿನ ಪ್ರತಿಭಟನೆ, ರೈತರ ಆಕ್ರೋಶ ದಿನ ಆಚರಣೆ ಮಾಡಲಾಗುತ್ತಿದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.
ಪಂಜಾಬ್, ಹರಿಯಾಣ ರೈತರು ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಜಾರಿಗಾಗಿ ಹೋರಾಟ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸದೆ ಪೊಲೀಸ್ ಬಲದ ಮೂಲಕ ಚಳವಳಿ ಹತ್ತಿಕ್ಕುತ್ತಿದೆ. ಗೋಲಿಬಾರ್ ಮಾಡಿ ರೈತರನ್ನು ಕೊಲ್ಲುತ್ತಿದೆ. ರೈತರ ಜತೆಗೆ ಸಭೆ ನಡೆಸಿದ ನಾಟಕವಾಡಿ ಸಮಸ್ಯೆ ಬಗೆಹರಿಸದೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ. ಇದರ ವಿರುದ್ಧ ಸಂಯುಕ್ತ ಕಿಸಾನ್ ಮೋರ್ಚಾ ರೈತ ಸಂಘಟನೆಯ ಹೋರಾಟ ಬೆಂಬಲಿಸಲು ಮಾ.೧೨ರಂದು ರಾಜ್ಯಾದ್ಯಂತ ಪಂಜಿನ ಪ್ರತಿಭಟನೆ, ರೈತರ ಆಕ್ರೋಶ ದಿನ ಆಚರಿಸಲು ತೀರ್ಮಾನಿಸಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ರೈತ ಸಂಘಟನೆಗಳು ಪಂಜಿನ ಪ್ರತಿಭಟನಾ ಮೆರವಣಿಗೆ ನಡೆಸಲಿವೆ. ಮಾ.೧೫ರ ನಂತರ ಧಾರವಾಡದಲ್ಲಿ ಟ್ರ್ಯಾಕ್ಟರ್ ರ್‍ಯಾಲಿ ನಡೆಸಿ ಚಳವಳಿ ತೀವ್ರಗೊಳಿಸಲು ನಿರ್ಧರಿಸಲಾಗಿದೆ ಎಂದರು.
ಇತ್ತೀಚೆಗೆ ಅಬುದಾಬಿಯಲ್ಲಿ ನಡೆದ ಡಬ್ಲ್ಯೂಟಿಒ ಒಪ್ಪಂದ ಮುಕ್ತಾಯವಾಗಿದೆ. ಈ ಸಭೆಯಲ್ಲಿ ಭಾಗವಹಿಸಿದ್ದ ಹಲವು ದೇಶಗಳ ರೈತ ಪ್ರತಿನಿಧಿಗಳು ಒಪ್ಪಂದ ವಿರೋಧಿಸಿದ್ದೆವು. ದೇಶದ ರೈತರ ಹೋರಾಟ ಪರಿಗಣಿಸಿ ಕೇಂದ್ರ ಸರ್ಕಾರ ಕೂಡ ಒಪ್ಪಂದ ವಿರೋಧಿಸಿದೆ. ಇದರಿಂದಾಗಿ ಒಪ್ಪಂದಕ್ಕೆ ತೆರೆಬಿದ್ದಿದೆ. ಇದರಿಂದ ಅನಾವಶ್ಯಕವಾಗಿ ವಿದೇಶದಿಂದ ಆಮದಾಗುವ ಕೃಷಿ ಉತ್ಪನ್ನಗಳ ಆಮದು ನೀತಿಯಿಂದ ದೇಶಿಯ ರೈತರ ಮೇಲೆ ಕೆಟ್ಟ ಪರಿಣಾಮ ಬೀರುವುದು ತಪ್ಪುತ್ತದೆ. ಮುಂದಿನ ಸಭೆ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿದ್ದು, ಈ ಕುರಿತು ತೀರ್ಮಾನವಾಗಲಿದೆ ಎಂದರು.
ಬರಗಾಲದ ಹಿನ್ನೆಲೆಯಲ್ಲಿ ಸಾಲ ವಸೂಲಾತಿ ನಿಲ್ಲಿಸಬೇಕೆಂದು ರಾಜ್ಯ ಸರ್ಕಾರ ಸೂಚನೆ ನೀಡಿದ್ದರೂ ಬ್ಯಾಂಕುಗಳು ಬಲವಂತವಾಗಿ ವಸೂಲಿಗೆ ಮುಂದಾಗಿದ್ದು, ರೈತರಿಗೆ ನೋಟಿಸ್ ನೀಡುತ್ತಿವೆ. ಇದರ ವಿರುದ್ಧರೂ ಪ್ರಬಲ ಹೋರಾಟ ಹಮ್ಮಿಕೊಳ್ಳಲು ಚರ್ಚೆ ನಡೆಸಲಾಗುತ್ತಿದೆ. ಆನ್‌ಲೈನ್ ಗೇಮ್ ಹಾವಳಿಯಿಂದ ಯುವ ಪೀಳಿಗೆ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಆನ್ಲೈನ್ ಗೇಮ್ ನಿಷೇಧ ಮಾಡಿ, ಯುವಕರ ಭವಿಷ್ಯ ಹಾಳಾಗುವುದನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದರು.