ಶಿವಮೊಗ್ಗ: ಆಗಸ್ಟ್ 15ರಿಂದ ಶಿವಮೊಗ್ಗದಿಂದ ಚೆನ್ನೈಗೆ ವಿಮಾನ ಸೇವೆ ಆರಂಭವಾಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಹೇಳಿದ್ದು, ಇದರೊಂದಿಗೆ ಸ್ಪೈಸ್ ಜೆಟ್ ಹೈದರಾಬಾದ್ ಸೇರಿದಂತೆ ಪ್ರಮುಖ ನಗರಗಳಿಗೆ ವಾರಕ್ಕೊಮ್ಮೆ ವಿಮಾನಯಾನ ಸೇವೆ ನಡೆಸಲಿದೆ.
ನಗರದ ರೈಲ್ವೆ ನಿಲ್ದಾಣದಲ್ಲಿ ಶಿವಮೊಗ್ಗ-ಚೆನ್ನೈ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಚೆನ್ನೈ ವಿಮಾನ ಹಾರಾಟದ ಜೊತೆಗೆ ವಾರದಲ್ಲಿ ಒಂದು ದಿನ ಹೈದರಾಬಾದ್ ಸೇರಿದಂತೆ ಪ್ರಮುಖ ನಗರಗಳಿಗೂ ಸ್ಪೈಸ್ ಜೆಟ್ ಹಾರಾಟ ನಡೆಸಲಿದೆ. ಶಿವಮೊಗ್ಗ ವಿಮಾನ ನಿಲ್ದಾಣ ಮಧ್ಯ ಕರ್ನಾಟಕದ ಪ್ರಮುಖ ನಿಲ್ದಾಣ ಆಗಿದೆ. ಇಲ್ಲಿ ರಾತ್ರಿ ವೇಳೆ ಇಳಿಯಲು ದೀಪ ಅಳವಡಿಸಲಾಗಿದೆ. ಅದಕ್ಕೆ ಡಿಜಿಸಿಎ ಅನುಮತಿ ಸಿಗಬೇಕು. ಕೆಲ ದಿನಗಳಲ್ಲಿ ಅನುಮತಿ ಸಿಗಲಿದೆ. ಮಂಗಳೂರು ಬಳಿಕ ರಾತ್ರಿ ವಿಮಾನ ಇಳಿಯುವ ವ್ಯವಸ್ಥೆ ಹೊಂದಿರುವ ವಿಮಾನ ನಿಲ್ದಾಣ ಮತ್ತು ಅತ್ಯಂತ ಸುರಕ್ಷಿತ ನಿಲ್ದಾಣ ಆಗಿ ಹೊರಹೊಮ್ಮಲಿದೆ ಎಂದು ಹೇಳಿದರು.
ಬೀರೂರು ಮಾರ್ಗ ಡಬಲಿಂಗ್ ಆಗಬೇಕು. ಆಗ ರೈಲುಗಳು ಬೇಗ ಹೋಗಬಹುದು. ಇದಕ್ಕಾಗಿ 1200 ಕೋಟಿ ಪ್ರಸ್ತಾವನೆ ಹೋಗಿದೆ. ಅನುಮತಿ ಶೀಘ್ರವೇ ಸಿಗುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ತಾಳಗುಪ್ಪದಿಂದ ಕೊಂಕಣ ರೈಲ್ವೆ ಸಂಪರ್ಕ ಕಲ್ಪಿಸಲು ಅರಣ್ಯ ಸಮಸ್ಯೆ ಇದೆ. ಹಾಗಾಗಿ ಬೀರೂರು, ಹಾಸನ, ಮಂಗಳೂರು ಸಂಪರ್ಕ ಪ್ರಸ್ತಾವನೆ ಹೋಗಿದೆ. ಇದು ಖಂಡಿತ ಯಶಸ್ವಿ ಆಗಲಿದೆ ಎಂದರು