ಮಂಡ್ಯ: ಕೆಆರ್‌ಎಸ್ ಅಣೆಕಟ್ಟೆಯಿಂದ ಕಾವೇರಿ ನದಿಗೆ ಒಂದು ಲಕ್ಷ ಕ್ಯುಸೆಕ್’ಗೂ ಹೆಚ್ಚು ನೀರು ಹರಿಸುತ್ತಿದ್ದು, ಶ್ರೀರಂಗಪಟ್ಟಣ ಸುತ್ತಮುತ್ತ ನದಿ ತೀರದ ದೇವಾಲಯ, ರಸ್ತೆಗಳು ಜಲಾವೃತವಾಗಿವೆ.
ಸಕ್ಕರೆ ನಾಡು ಮಂಡ್ಯದಲ್ಲಿ ಎರಡು ದಿನ ಕಳೆದರೂ ಪ್ರವಾಹ ತಗ್ಗಿಲ್ಲ. ಜಿಲ್ಲೆಯಲ್ಲಿ ಅಪಾಯದ ಮಟ್ಟದಲ್ಲಿ ಕಾವೇರಿ, ಹೇಮಾವತಿ ನದಿಗಳ ಪ್ರವಾಹದ ಅಬ್ಬರಕ್ಕೆ ನದಿ ಪಾತ್ರದ ಗ್ರಾಮಗಳು ನಲುಗಿದ್ದು , ಅತ್ತ ಕೆ.ಆರ್.ಪೇಟೆ ತಾಲೂಕಿನಲ್ಲಿ ಹೇಮಾವತಿ ಪ್ರವಾಹ ಹೆಚ್ಚಾಗಿದೆ. ಇತ್ತ ಶ್ರೀರಂಗಪಟ್ಟಣ ತಾಲೂಕಿನಲ್ಲಿ ಕಾವೇರಿ ಪ್ರವಾಹ ಉಂಟಾಗಿದ್ದು, ಕಾವೇರಿ ಹೇಮೆ ನದಿಯ ಪ್ರವಾಹದಿಂದ ಹಲವು ಗ್ರಾಮಗಳು ಜಲಾವೃತಗೊಂಡಿದೆ.
ನದಿ ಪಾತ್ರದ ರೈತರ ಜಮೀನುಗಳಿಗೆ ಪ್ರವಾಹದ ನೀರು ನುಗ್ಗಿ ರೈತರ ಬೆಳೆ ನಾಶವಾಗಿದೆ .
ಶ್ರೀರಂಗಪಟ್ಟಣದಲ್ಲಿ ಸಾಯಿ ಮಂದಿರ,ಗಣಪತಿ ಹಾಗು ಆಂಜನೇಯ ದೇಗುಲ,ಸೇರಿ ಹಲವು ದೇಗುಲಗಳಿಗೆ ಜಲದಿಗ್ಬಂದನ ಉಂಟಾಗಿದೆ.
ಪ್ರಸಿದ್ದ ರಂಗನತಿಟ್ಟು ಸಂಗಮ, ಗೋಸಾಯ್ ಘಾಟ್, ಸ್ನಾನಘಟ್ಟ ಮುಳುಗಡೆಯಾಗಿದೆ. ಪಟ್ಟಣ ಸಮೀಪದ ಗಂಜಾಂನ ಪ್ರಸಿದ್ಧ ನಿಮಿಷಾಂಬ ದೇವಾಲಯದ ಮೆಟ್ಟಿಲುಗಳು ಮುಳುಗಡೆಯಾಗಿವೆ. ದೇವಾಲಯದ ಮುಂದಿನ ರಸ್ತೆ ಕೂಡ ಜಲಾವೃತವಾಗಿದೆ. ಪಟ್ಟಣದಲ್ಲಿನ ಐತಿಹಾಸಿಕ ವೆಲ್ಲೆಸ್ಲಿ ಸೇತುವಗೆ ಮುಳುಗಡೆ ಭೀತಿ ಎದುರಾಗಿದೆ.