Thursday, April 17, 2025
Google search engine

Homeರಾಜ್ಯಸುದ್ದಿಜಾಲಕಾರಾಗೃಹ ಬಂಧಿಗಳು ಉತ್ತಮ ಬದುಕು ಕಟ್ಟಿಕೊಳ್ಳುವತ್ತ ಗಮನಹರಿಸಿ: ಶಾಮ್ ಪ್ರಸಾದ್

ಕಾರಾಗೃಹ ಬಂಧಿಗಳು ಉತ್ತಮ ಬದುಕು ಕಟ್ಟಿಕೊಳ್ಳುವತ್ತ ಗಮನಹರಿಸಿ: ಶಾಮ್ ಪ್ರಸಾದ್

ಮಡಿಕೇರಿ : ಜಿಲ್ಲಾ ಕಾರಾಗೃಹದಲ್ಲಿನ ಬಂಧಿಗಳು ಮುಂದಿನ ದಿನಗಳಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳುವತ್ತ ಗಮನಹರಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಎಚ್.ಸಿ.ಶಾಮ್ ಪ್ರಸಾದ್ ಅವರು ಸಲಹೆ ಮಾಡಿದ್ದಾರೆ. ನಗರದ ಹೊರ ವಲಯದಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿನ 50 ಬಂಧಿಗಳಿಗೆ ನಬಾರ್ಡ್, ಒಡಿಪಿ ಹಾಗೂ ಜಿಲ್ಲಾ ಕಾರಾಗೃಹ ವತಿಯಿಂದ ಒಂದು ತಿಂಗಳ ಕಾಲ ಎಲೆಕ್ಟ್ರೀಷಿಯನ್ ಮತ್ತು ಪ್ಲಂಬಿಂಗ್ ಸಂಬಂಧ ಏರ್ಪಡಿಸಲಾಗಿದ್ದ ‘ವೃತ್ತಿ ಕೌಶಲ್ಯ ತರಬೇತಿ’ ಕಾರ್ಯಾಕ್ರಮದ ಸಮಾರೋಪ ಸಮಾರಂಭದಲ್ಲಿ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.

ನಬಾರ್ಡ್ ವತಿಯಿಂದ ಏರ್ಪಡಿಸಲಾಗಿದ್ದ ವೃತ್ತಿ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮವು ಬಹು ಉಪಯುಕ್ತವಾಗಿದ್ದು, ಕಾರಾಗೃಹ ಬಂಧಿಗಳಿಗೆ ಇದೊಂದು ಸುವರ್ಣ ಅವಕಾಶವಾಗಿದೆ ಎಂದರು. ನಬಾರ್ಡ್‍ನ ಮಹಾ ಪ್ರಬಂಧಕರಾದ ಡಾ.ಕೆ.ಎಸ್.ಮಹೇಶ್ ಅವರು ಮಾತನಾಡಿ ವೃತ್ತಿ ಕೌಶಲ್ಯ ತರಬೇತಿ ಪಡೆಯುವುದರಿಂದ ಸ್ವ ಉದ್ಯೋಗ ಕೈಗೊಳ್ಳಲು ಸಾಧ್ಯವಾಗಲಿದೆ. ಆ ನಿಟ್ಟಿನಲ್ಲಿ ಕಾರಾಗೃಹ ಬಂಧಿಗಳು ಮುಂದಿನ ದಿನಗಳಲ್ಲಿ ಉತ್ತಮ ಜೀವನ ನಡೆಸುವತ್ತ ಗಮನಹರಿಸಬೇಕು ಎಂದು ಅವರು ಸಲಹೆ ಮಾಡಿದರು.

ನಬಾರ್ಡ್ ಸಂಸ್ಥೆಯು ಕಳೆದ 40 ವರ್ಷಗಳಿಂದ ಕೃಷಿ, ತೋಟಗಾರಿಕೆ, ಪಶುಪಾಲನೆ, ಜಲಾನಯನಕ್ಕೆ ಒತ್ತು ನೀಡುವುದು, ಜೊತೆಗೆ ಮಹಿಳಾ ಸಬಲೀಕರಣ, ಬುಡಕಟ್ಟು ಜನರ ಶ್ರೇಯೋಭಿವೃದ್ಧಿಗೆ ಗಮನ ಹರಿಸುವುದು, ಹೀಗೆ ಕಾರ್ಯಗಳನ್ನು ಹಮ್ಮಿಕೊಂಡಿದೆ ಎಂದು ಡಾ.ಕೆ.ಎಸ್.ಮಹೇಶ್ ಅವರು ತಿಳಿಸಿದರು.ಜಿಲ್ಲಾ ಕಾರಾಗೃಹ ಅಧೀಕ್ಷಕರಾದ ಸಂಜಯ್ ಜತ್ತಿ ಅವರು ಮಾತನಾಡಿ ಮಡಿಕೇರಿಯ ಕಾರಾಗೃಹದಲ್ಲಿ ಇದೇ ಮೊದಲ ಬಾರಿಗೆ ಕಾರಾಗೃಹ ಬಂಧಿಗಳಿಗೆ ವೃತ್ತಿ ಕೌಶಲ್ಯ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಕಾರ್ಯವಾಗಿದೆ. ಕಾರಾಗೃಹ ಬಂಧಿಗಳು ಸ್ವ ಉದ್ಯೋಗ ಪಡೆದು ಸ್ವಾವಲಂಬಿಗಳಾಗಿ ಇತರರಂತೆ ಬದುಕು ನಡೆಸುವಂತಾಗಬೇಕು ಎಂದು ಸಲಹೆ ಮಾಡಿದರು.

ನಬಾರ್ಡ್ ವತಿಯಿಂದ 50 ತರಬೇತಿದಾರರಿಗೆ ಟೂಲ್ ಕಿಟ್ ವಿತರಿಸಲಾಯಿತು. ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಬಿ.ಪ್ರಸಾದ್, ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಗಂಗಾಧರ ನಾಯ್ಕ್, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರಾದ ಉಮಾಕಾಂತ್, ಕೆನರಾ ಬ್ಯಾಂಕಿನ ಪ್ರಾದೇಶಿಕ ಮುಖ್ಯಸ್ಥರಾದ ರಾಜೇಶ್ ಕುಮಾರ್, ಎಸ್‍ಬಿಐನ ಪ್ರಾದೇಶಿಕ ಮುಖ್ಯಸ್ಥರಾದ ಶ್ರೀಜಿತ್, ಓಡಿಪಿ ಸಂಸ್ಥೆಯ ನಿರ್ದೇಶಕರಾದ ಫಾದರ್ ಅಲೆಕ್ಸ್ ಪ್ರಶಾಂತ್ ಸಿಕ್ವೇರ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕರಾದ ಜಯಪ್ಪ ಇತರರು ಇದ್ದರು.

ನಬಾರ್ಡ್ ಮಹಾ ಪ್ರಬಂಧಕರ ಭೇಟಿ: ನಬಾರ್ಡ್‍ನ ಮಹಾ ಪ್ರಬಂಧಕರಾದ ಡಾ.ಕೆ.ಎಸ್.ಮಹೇಶ್ ಅವರು ಇತ್ತೀಚೆಗೆ ನಗರದ ಡಿಸಿಸಿ ಬ್ಯಾಂಕ್‍ಗೆ ಭೇಟಿ ನೀಡಿ ಸಮಾಲೋಚನೆ ನಡೆಸಿದರು. ನಂತರ ಅಪ್ಪಂಗಳದ ಸಾಂಬಾರ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿ ವೀಕ್ಷಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಅಂಕೇಗೌಡ ಅವರು ಇದ್ದರು.ಬಳಿಕ ನಾಪೋಕ್ಲು ಮತ್ತು ವಿರಾಜಪೇಟೆ ರೈತ ಉತ್ಪಾದಕರ ಸಂಸ್ಥೆಗೆ ಭೇಟಿ ನೀಡಿ ಸಮಾಲೋಚನೆ ನಡೆಸಿದರು. ಕಾಫಿ ಬೆಳೆ ಸಂಬಂಧ ವಾಣಿಜ್ಯ ಅಭಿವೃದ್ಧಿ ಬಗ್ಗೆ ಚರ್ಚಿಸಿದರು. ನಂತರ ನಂಜರಾಯಪಟ್ಟಣದ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಕ್ಕೆ ಭೇಟಿ ನೀಡಿ ನಬಾರ್ಡ್‍ನ ಗೋದಾಮು ಪರಿಶೀಲಿಸಿದರು. ಬಳಿಕ ಬಾಳೆಗುಂಡಿಯ ಹಾಡಿಗೆ ಭೇಟಿ ನೀಡಿ ಟಿಡಿಎಫ್ ನಾನ್‍ವಾಡಿ ಯೋಜನೆಯನ್ನು ಪರಿಶೀಲಿಸಿದರು. ಬಾಳೆಗುಂಡಿಯ 20 ಆದಿವಾಸಿ ಕುಟುಂಬಗಳಿಗೆ ಕೋಳಿ ಮರಿ ವಿತರಿಸಿದರು.

ಬಳಿಕ ಚಿಕ್ಕಳುವಾರದಲ್ಲಿನ ಕೊಡಗು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ವೀಕ್ಷಿಸಿದರು. ಈ ಸಂದರ್ಭದಲ್ಲಿ ಕುಲಪತಿ ಅಶೋಕ್ ಎಸ್.ಆಲೂರ ಇದ್ದರು. ನಗರದ ಕೂಡಿಗೆಯ ಗ್ರಾಮೀಣ ಸ್ವ ಉದ್ಯೋಗ ತರಭೇತಿ ಕೇಂದ್ರಕ್ಕೆ ಭೇಟಿ ನೀಡಿ ಕುಡಿಯುವ ನೀರು ಘಟಕ ಉದ್ಘಾಟಿಸಿದರು. ಕಂಪ್ಯೂಟರ್, ಪ್ರೋಜೆಕ್ಟರ್ ಮತ್ತು ಜೆರಾಕ್ಸ್ ಯಂತ್ರ ವಿತರಿಸಿದರು. ನಬಾರ್ಡ್‍ನ ಜಿಲ್ಲಾ ವ್ಯವಸ್ಥಾಪಕರಾದ ರಮೇಶ್ ಬಾಬು ಇದ್ದರು.

RELATED ARTICLES
- Advertisment -
Google search engine

Most Popular