ಮಡಿಕೇರಿ : ಜಿಲ್ಲೆಯಲ್ಲಿನ ರಾಷ್ಟ್ರೀಯ ಹೆದ್ದಾರಿ, ಲೋಕೋಪಯೋಗಿ ಹಾಗೂ ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಯ ರಸ್ತೆಯನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ‘ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆ’ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಗತ್ಯವಿರುವ ಕಡೆಗಳಲ್ಲಿ ವೇಗ ನಿಯಂತ್ರಣ ಸಂಬಂಧ ಹಂಪ್‍ಗಳನ್ನು ಅಳವಡಿಸುವುದು. ಜೊತೆಗೆ ಎದ್ದು ಕಾಣುವಂತೆ ಬಿಳಿ ಪಟ್ಟೆ ಬರೆಯುವುದು. ರಸ್ತೆ ಬದಿ ಗಿಡಗಂಟೆಗಳನ್ನು ಕಡಿಯುವುದು, ಜೊತೆಗೆ ರಸ್ತೆ ತಿರುವು, ಉಬ್ಬು ರಸ್ತೆ ಮತ್ತಿತರ ಬಗ್ಗೆ ಸೂಚನಾ ಫಲಕ ಅಳವಡಿಸಿ, ರಸ್ತೆ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುವಂತೆ ಎಂಜಿನಿಯರ್‍ಗಳಿಗೆ ತಾಕೀತು ಮಾಡಿದರು.
ಚಾಲಕರಿಗೆ ರಸ್ತೆಗೆ ಸಂಬಂಧಿಸಿದಂತೆ ಮಾಹಿತಿ ದೊರೆಯುವಂತಾಗಬೇಕು. ಇದರಿಂದ ವೇಗ ನಿಯಂತ್ರಣಕ್ಕೆ ಸಹಕಾರಿಯಾಗಿ ಅಪಘಾತ ತಡೆಯಬಹುದಾಗಿದೆ. ಆ ನಿಟ್ಟಿನಲ್ಲಿ ತುರ್ತು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸೂಚಿಸಿದರು.
ಕುಶಾಲನಗರದಿಂದ ಸಂಪಾಜೆ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ ಹಲವು ಅಪಘಾತಗಳು ಸಂಭವಿಸುತ್ತಿದ್ದು, ಅಪಘಾತ ನಿಯಂತ್ರಣಕ್ಕೆ ಕ್ರಮವಹಿಸಬೇಕು. ಕೊಯನಾಡು ಬಳಿ ಇತ್ತೀಚೆಗೆ ಸಂಭವಿಸಿದ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದು, ಪದೇ ಪದೇ ಹೆದ್ದಾರಿಯಲ್ಲಿ ಅಪಘಾತ ಸಂಭವಿಸುತ್ತಿದ್ದು, ಈ ಬಗ್ಗೆ ಸೂಚನಾ ಫಲಕಗಳನ್ನು ಅಳವಡಿಸಬೇಕು ಎಂದರು. ವಿರಾಜಪೇಟೆ-ಗೋಣಿಕೊಪ್ಪ ಮಾರ್ಗದ ಆತೂರು ಜಂಕ್ಷನ್ ಬಳಿ ಸೂಚನಾ ಫಲಕ ಅಳವಡಿಸಬೇಕು. ಜೊತೆಗೆ ರಸ್ತೆ ಹಂಪ್‍ಗಳನ್ನು ಅಳವಡಿಸಬೇಕು. ವೇಗವಾಗಿ ವಾಹನ ಚಲಾಯಿಸುವುದರಿಂದ ಅಪಘಾತಗಳು ಹೆಚ್ಚಾಗಲಿವೆ. ಈ ಸಂಬಂಧ ಗಮನಹರಿಸುವಂತೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.
ರಾಷ್ಟ್ರೀಯ ಹೆದ್ದಾರಿ, ಲೋಕೋಪಯೋಗಿ, ಪಂಚಾಯತ್ ಇಲಾಖೆ ವ್ಯಾಪ್ತಿಯ ರಸ್ತೆಗಳನ್ನು ಸರಿಯಾಗಿ ನಿರ್ವಹಣೆ ಮಾಡದೆ ಅಪಘಾತಗಳು ಸಂಭವಿಸಿದ್ದಲ್ಲಿ ತಮ್ಮ ಮೇಲೆ ಸೋಮೋಟೋ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಅವರು ಎಚ್ಚರಿಸಿದರು. ರಸ್ತೆ ಸುರಕ್ಷತೆ ಬಗ್ಗೆ ಎಂಜಿನಿಯರ್‍ಗಳು ಕೈಗೊಂಡಿರುವ ಕ್ರಮಗಳ ಬಗ್ಗೆ ಒಂದು ವಾರದಲ್ಲಿ ತಾಲ್ಲೂಕುವಾರು ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.
ಮುಂದಿನ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆ ಆಗಸ್ಟ್, 21 ರಂದು ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಅವರು ತಿಳಸಿದರು. ಜಿಲ್ಲಾ ಉಪ ಪೊಲೀಸ್ ವರಿಷ್ಠಾಧಿಕಾರಿ ಬಾರಿಕೆ ದಿನೇಶ್ ಕುಮಾರ್ ಅವರು ಮಾತನಾಡಿ ರಸ್ತೆ ಸುರಕ್ಷತೆ ಸಂಬಂಧಿಸಿದಂತೆ ಎಲ್ಲೆಲ್ಲಿ ಹಂಪ್‍ಗಳನ್ನು ಅಳವಡಿಸಬೇಕು. ಬಿಳಿ ಬಣ್ಣ ಬಳಿಯಬೇಕು ಎಂಬ ಬಗ್ಗೆ, ಹೆಚ್ಚಿನ ಅಫಘಾತ ಸಂಭವಿಸುವ ಸ್ಥಳದ ಬಗ್ಗೆ ಎರಡು ಮೂರು ದಿನದಲ್ಲಿ ಪಟ್ಟಿ ನೀಡಲಾಗುವುದು ಎಂದು ತಿಳಿಸಿದರು.
ಅಪಘಾತದಿಂದ ಹಲವರು ಜೀವ ಕಳೆದುಕೊಳ್ಳುತ್ತಿದ್ದು, ಅಪಘಾತ ತಡೆಯುವುದು ಅತೀ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಅತೀ ಮುಖ್ಯ. ಪ್ರತಿಯೊಬ್ಬರ ಜೀವವು ಅಮೂಲ್ಯವಾಗಿದ್ದು, ಈ ಬಗ್ಗೆ ಗಮನಹರಿಸಬೇಕು. ಆ ನಿಟ್ಟಿನಲ್ಲಿ ಪೊಲೀಸ್, ರಾಷ್ಟ್ರೀಯ ಹೆದ್ದಾರಿ, ಲೋಕೋಪಯೋಗಿ, ಪಂಚಾಯತ್ ರಾಜ್ ಇಲಾಖೆ, ಪ್ರಾದೇಶಿಕ ಸಾರಿಗೆ ಇಲಾಖೆ, ಹೀಗೆ ವಿವಿಧ ಇಲಾಖೆಗಳ ಜವಾಬ್ದಾರಿ ಹೆಚ್ಚಿನದ್ದಾಗಿದೆ ಎಂದರು.
ಅರ್ಧ ಕಿಲೋಮೀಟರ್ ಒಳಗೆ ಪದೇ ಪದೇ ಅಪಘಾತ ಸಂಭವಿಸಿದ್ದಲ್ಲಿ ‘ಬ್ಲಾಕ್ ಸ್ಪಾಟ್ ಎಂದು ಗುರುತಿಸಲಾಗುತ್ತದೆ ಎಂದು ತಿಳಿಸಿದರು. ರಾಷ್ಟ್ರೀಯ ಹೆದ್ದಾರಿ ವಿಭಾಗದ ಎಂಜಿನಿಯರ್ ಜಿ.ಎಸ್.ಗಿರೀಶ್, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಇಬ್ರಾಹಿಂ, ಪಂಚಾಯತ್ ರಾಜ್ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಜಿ.ಕೆ.ನಾಯಕ್ ಅವರು ರಸ್ತೆ ಸುರಕ್ಷತೆ ಬಗ್ಗೆ ಮಾಹಿತಿ ನೀಡಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಸತೀಶ್, ಪೌರಾಯುಕ್ತರಾದ ಎಚ್.ಆರ್.ರಮೇಶ್, ಕೆಎಸ್‍ಆರ್‍ಟಿಸಿ ಮಡಿಕೇರಿ ಘಟಕದ ಸಹಾಯಕ ಸಂಚಾರ ಅಧೀಕ್ಷಕರಾದ ಎ.ಈರಸಪ್ಪ ಇತರರು ಇದ್ದರು.