ಮೈಸೂರು: ಶರಣ ಸಂಸ್ಕೃತಿಯಂತೆ ನಿಸರ್ಗಪರ ಜನಪದ ಸಂಸ್ಕೃತಿಯೂ ಮಾನವೀಯ ವಿಚಾರಗಳ ಪ್ರತಿನಿಧಿಯಾಗಿದೆ ಎಂದು ಕೆ.ಆರ್.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ಪ್ರಾಧ್ಯಾಪಕ ಡಾ.ಮೈಸೂರು ಕೃಷ್ಣಮೂರ್ತಿ ತಿಳಿಸಿದರು.
ಜಿಲ್ಲಾ ಮತ್ತು ತಾಲೂಕು ಶರಣ ಸಾಹಿತ್ಯ ಪರಿಷತ್ತು, ಶೇಷಾದ್ರಿಪುರಂ ಪದವಿ ಕಾಲೇಜು ಕನ್ನಡ ವಿಭಾಗ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶ ಸಹಯೋಗದಲ್ಲಿ ಸೋಮವಾರ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ೨೦೨೩- ೪ನೇ ಸಾಲಿನ ದತ್ತಿ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಜನಪದ ಸಾಹಿತ್ಯದಲ್ಲಿ ಮಲೆ ಮಹದೇಶ್ವರರು ಕುರಿತು ಮಾತನಾಡಿದ ಅವರು, ಇಂದಿನ ವೈಜ್ಞಾನಿಕ ಯುಗದಲ್ಲಿ ಸಾಂಸ್ಕೃತಿಕ ವಿಚಾರ ಹಿಂದೆ ಸರಿಯುತ್ತಿದೆ. ಭವಿಷ್ಯದ ಚಿಂತನೆ ಮತ್ತು ಮನುಷ್ಯತ್ವದ ಪಾಠಗಳು ಜನಪದ ಸಾಹಿತ್ಯದಲ್ಲಿ ನಮಗೆ ವಿಫುಲವಾಗಿ ಸಿಗುತ್ತವೆ ಎಂದು ಹೇಳಿದರು.
ಮಲೆ ಮಹದೇಶ್ವರ ಮಹಾಕಾವ್ಯ ಮನುಷ್ಯತ್ವದ ಮತ್ತು ಸಮಾನತೆಯ ಆಶಯವನ್ನು ಸಾರುವ ಕಾವ್ಯವಾಗಿದೆ. ಈ ಕೃತಿ ಸ್ಥಾಪಿತ ಮೌಲ್ಯಗಳನ್ನು ವಿರೋಧಿಸಿ ನಿಜವಾದ ಮೌಲ್ಯಗಳನ್ನು ಸಾರಲು ಪ್ರಕಟಗೊಂಡದ್ದೇ ಈ ಮಹಾಕಾವ್ಯ. ಇವುಗಳನ್ನು ಆದರ್ಶವಾಗಿಟ್ಟುಕೊಂಡು ಸಮಾನತಾ ಭಾವದಿಂದ ಸಾಂಸ್ಕೃತಿಕ ಅಸ್ಮಿತೆಯನ್ನು ಉಳಿಸುವತ್ತ ಎಲ್ಲರೂ ಗಮನ ಹರಿಸಬೇಕು ಎಂದು ಅವರು ಸಲಹೆ ನೀಡಿದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಕೇವಲ ಪಠ್ಯದಿಂದ ಮಾತ್ರ ವ್ಯಕ್ತಿತ್ವ ವಿಕಸನ ಸಾಧ್ಯವಿಲ್ಲ. ಅದರೊಂದಿಗೆ ಇಂಥಾ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗುವುದರಿಂದ ಸಾಧ್ಯ. ಇದು ಸ್ಪರ್ಧಾತ್ಮಕ ಯುಗ, ಇಲ್ಲಿ ವಿದ್ಯೆಗೆ ಬಹಳ ಮಹತ್ವವಿರುವ ಯುಗ. ಆದ್ದರಿಂದ ವಿದ್ಯಾರ್ಥಿಗಳು ಆಸಕ್ತಿಯಿಂದ ಕಲಿತಾಗ ವಿದೇಶಗಳಲ್ಲೂ ಒಳ್ಳೆಯ ಉದ್ಯೋಗ ಪಡೆಯುವ ಅವಕಾಶವನ್ನು ಹೊಂದಬಹುದು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಹಿರಿಯ ಜಾನಪದ ವಿದ್ವಾಂಸ ಡಾ.ಪಿ.ಕೆ.ರಾಜಶೇಖರ್ ತಮ್ಮ ಕನ್ನಡ ಜನಪದ ಸಾಹಿತ್ಯದ ಮೇರು ಕೃತಿ ಮಲೆಮಹದೇಶ್ವರ ಮಹಾಕಾವ್ಯವು ರೂಪುಗೊಂಡ ಬಗೆಯನ್ನು ಕುರಿತು ತಿಳಿಸಿದರು.
ಮೈಸೂರು ವಿವಿ ಗಾಂಧಿ ಭವನ ನಿವೃತ್ತ ನಿರ್ದೇಶಕ ಹಾಗೂ ದತ್ತಿ ದಾನಿ ಡಾ.ಎಸ್.ಶಿವರಾಜಪ್ಪ ಅವರು, ಮಲೆ ಮಹದೇಶ್ವರ ಮಹಾಕಾವ್ಯದ ಹುಟ್ಟು ಮತ್ತು ಬೆಳವಣಿಗೆಯ ಕುರಿತು ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲೆ ಪ್ರೊ.ಸೌಮ್ಯ ಈರಪ್ಪ ಮಾತನಾಡಿ, ಇದೊಂದು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಕಾರ್ಯಕ್ರಮವೇ ಸರಿ. ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಒಳ್ಳೆಯ ಅವಕಾಶ ಸಿಕ್ಕಿದೆ. ಇದನ್ನು ನಿಮ್ಮ ಜ್ಞಾನಾಭಿವೃದ್ಧಿಗೆ ಬಳಸಿಕೊಳ್ಳಿ ಎಂದು ಹೇಳಿದರು.
ಇದೇ ವೇಳೆ ಡಾ.ಪಿ.ಕೆ. ರಾಜಶೇಖರ್ ಮತ್ತು ಡಾ. ಮೈಸೂರು ಕೃಷ್ಣಮೂರ್ತಿ ಅವರು ಜಂಟಿಯಾಗಿ ಮೂಲಧಾಟಿ ಜನಪದ ಗೀತೆಗಳನ್ನು ಹಾಡಿ ರಂಜಿಸಿದರು. ಕಾಲೇಜಿನ ವಿದ್ಯಾರ್ಥಿಗಳು ಮಲೆ ಮಹದೇಶ್ವರನನ್ನು ಸ್ತುತಿಸಿ ಹಾಡಿರೆ ರಾಗಗಳ ಮತ್ತು ಮೂಡಲಗಿರಿಯೋನೆ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ಮೆಚ್ಚುಗೆ ಗಳಿಸಿದರು.
ಶರಣ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ದೇವರಾಜು ಪಿ.ಚಿಕ್ಕಳ್ಳಿ, ಮಾಜಿ ಜಿಲ್ಲಾಧ್ಯಕ್ಷ ಎಂ.ಚಂದ್ರಶೇಖರ್ ಇದ್ದರು.