ಮೈಸೂರು: ಜಾನಪದ, ಸಂಪತ್ತು ಹಾಗೂ ನಮ್ಮ ಸಂಸ್ಕೃತಿಯಿಂದ ಭಾರತ ವಿಶ್ವಗುರುವಾಗಿದೆ ಎಂದು ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಅಭಿಪ್ರಾಯಪಟ್ಟರು.ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶನಾಲಯದ ಸಹಯೋಗದೊಂದಿಗೆ ಗೌತಮ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸೇವಾ ಟ್ರಸ್ಟ್ ವತಿಯಿಂದ ಕಲಾಮಂದಿರದ ಆವರಣದಲ್ಲಿರುವ ಕಿರು ರಂಗಮಂದಿರದಲ್ಲಿ ಆಯೋಜಿಸಿದ್ದ ರಂಗಭೂಮಿ, ಜಾನಪದ ಕಲಾಪ್ರಕಾರಗಳ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಒಂದು ದೇಶವೆಂದರೆ ಕಲ್ಲು, ಗುಡ್ಡೆ, ನದಿ, ನೀರು ಪರ್ವತಗಳಲ್ಲ. ಅದೇ ರೀತಿ ದೇಶವೆಂದರೆ ಭೂ ಪಟವೂ ಅಲ್ಲ. ದೇಶವೆಂದರೆ ಸಂಸ್ಕೃತಿಯ ಸಂಪತ್ತು. ಜಾನಪದ ಮತ್ತು ಜನಪದ ಸಂಸ್ಕೃತಿ ಭಾರತದ ಬೇರುಗಳು. ಈ ಬೇರುಗಳು ವಿಶ್ವದಾದ್ಯಂತ ಸಂಸ್ಕೃತಿಯನ್ನು ಬಿಂಬಿಸಿವೆ ಎಂದರು.ಜನಪದ ಕಲಾ ಪ್ರಕಾರಗಳು ಇಂದು ವಿಶ್ವಕ್ಕೆ ಮಾದರಿಯಾಗಿವೆ. ಅಷ್ಟು ಅದ್ಭುತ ಪ್ರತಿಭೆಯ ಕಲಾ ಪ್ರಕಾರಗಳು ನಮ್ಮಲಿವೆ. ನಾವು ಅದನ್ನು ಅರ್ಥ ಮಾಡಿಕೊಳ್ಳುವ ಸಾಮಾನ್ಯ ಪ್ರಜ್ಞೆ ನಮಲ್ಲಿರಬೇಕಾದ ಅವಶ್ಯಕತೆಯಿದೆ. ನಮ್ಮ ಸಂಸ್ಕೃತಿ ದೀಪದಿಂದ ದೀಪವನ್ನು ಬೆಳಗುವ ಸಂಸ್ಕೃತಿ. ನಾಡು ನುಡಿ ಜಲ ಭಾಷೆಯನ್ನು ಜೀವಂತವಾಗಿರಿಸುವ ನಮ್ಮ ಮಣ್ಣಿನ ಮೂಲ ಸಂಸ್ಕೃತಿ ಜನಪದ ಸಂಸ್ಕೃತಿ. ಇಂತಹ ಸಂಸ್ಕೃತಿಯನ್ನು ರಕ್ಷಣೆ ಮಾಡಲೆಂದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಾವಿರಾರು ಕೋಟಿ ದುಡ್ಡನ್ನು ವಿನಿಯೋಗ ಮಾಡುತ್ತಿದೆ. ಆದರೆ ಇಂದು ರಂಗಭೂಮಿ, ರಂಗಭೂಮಿಯಾಗಿ ಉಳಿದಿಲ್ಲ, ಅಲ್ಲಿನ ದೃಷ್ಟಿಕೋನವೇ ಬದಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಜನಪದ ಸಂಸ್ಕೃತಿ ದೇಶಕಟ್ಟುವ ಸಂಸ್ಕೃತಿ, ದೇಶ ಒಡೆಯುವ ಸಂಸ್ಕೃತಿಯಲ್ಲ. ಆದ್ದರಿಂದ ಜನಪದ ಸಂಸ್ಕೃತಿ ಎಲ್ಲರನ್ನು ಒಳಗೊಂಡು ದೇಶದ ಮನಸ್ಸುಗಳನ್ನು ಕಟ್ಟುವ ಸಂಸ್ಕೃತಿಯಾಗಿದೆ. ಹಾಗಾಗಿ ಇಲ್ಲಿ ಸೇರಿರುವ ಎಲ್ಲ ಶಿಬಿರಾರ್ಥಿಗಳು ಜನಪದ ಗೀತೆಗಳ ಮುಖಾಂತರವಾಗಿ ದೇಶ ಕಟ್ಟುವ, ಒಡೆದ ಮನಸ್ಸುಗಳನ್ನು ಕಟ್ಟುವ ಕೆಲಸ ಮಾಡಿ ಎಂದು ಹೇಳಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ, ಜನಪದ ಕಲೆಗಳು ಎಂದು ಕೂಡ ಮರೆಯಾಗಬಾರದು, ಮರೆಯಾಗದಂತೆ ಎಚ್ಚರ ವಹಿಸುವುದು ಇಡಿ ಸಮಾಜದ ಕರ್ತವ್ಯ. ಈ ಕಲೆಗಳನ್ನು ಮುಂದುವರೆಸಿಕೊಂಡು ಹೋಗೋಣ, ಈ ಕಲೆಗಳನ್ನು ಯುವ ಶಕ್ತಿಗೆ ನೀಡುತ್ತ, ಈ ನೆಲ ಮೂಲದ ಸಂಸ್ಕೃತಿಯನ್ನು ಉಳಿಸಿಕೊಳ್ಳುತ್ತ, ಸಂಸ್ಕೃತಿಯನ್ನು ಸಮೃದ್ಧಗೊಳಿಸೋಣ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ ಎಚ್.ಜನಾರ್ಧನ್, ಎಪಿಎಂಸಿ ಮಾಜಿ ಉಪಾಧ್ಯಕ್ಷ ಜವರಪ್ಪ, ಗೌತಮ ಟ್ರಸ್ಟ್‌ನ ಅಧ್ಯಕ್ಷ ಕೃಷ್ಣಮೂರ್ತಿ ತಲಕಾಡು ಇದ್ದರು.