ಬೆಂಗಳೂರು : ಕರ್ನಾಟಕ ರಾಜಕೀಯದಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿ ಸ್ಥಾನ ಕುರಿತ ಚರ್ಚೆ ತೀವ್ರಗೊಂಡಿದ್ದು, ಹೊರಗೆ ಸರ್ಕಾರ ಸ್ಥಿರವಾಗಿದೆ ಎನ್ನುವ ಚಿತ್ರಣ ಕಂಡು ಬರುತ್ತಿದ್ದರೂ ಆಂತರಿಕವಾಗಿ ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ಸಮರ ತೀವ್ರವಾಗಿರುವುದು ಎದ್ದು ಕಾಣುತ್ತಿವೆ.
ಇತ್ತ ಸಿಎಂ ಕುರ್ಚಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವಿನ ಜಟಾಪಟಿಯೊಂದಿಗೆ ಇದೀಗ ದಲಿತ ಮುಖ್ಯಮಂತ್ರಿ ಎಂಬ ಕೂಗು ಸೇರ್ಪಡೆಗೊಂಡಿದೆ. ಇನ್ನೂ ಈ ಕುರಿತು ಸಚಿವ ಸತೀಶ್ ಜಾರಕಿಹೊಳಿ ಅವರು ನೀಡಿರುವ ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್ ನಿರ್ಧಾರ ಕೈಗೊಂಡಿದೆ ಹೇಳಿಕೆ ಹಿನ್ನೆಲೆಯಲ್ಲಿ ಈ ಚರ್ಚೆ ತೀವ್ರಗೊಂಡಿದೆ.
ಮೂಲಗಳ ಪ್ರಕಾರ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಹಾಗೂ ತಮ್ಮ ಪುತ್ರ ಪ್ರಿಯಾಂಕ್ ಖರ್ಗೆಯನ್ನು ಉಪಮುಖ್ಯಮಂತ್ರಿಯಾಗಿ ಪರಿಗಣಿಸುವ ಚರ್ಚೆಗೆ ಒಲವು ತೋರಿದ್ದಾರೆ ಎನ್ನಲಾಗುತ್ತಿದೆ. ಈ ಮಾಹಿತಿ ಸಿದ್ದರಾಮಯ್ಯ ಬಣದ ಕಣ್ಣು ಕೆಂಪಗಾಗುವಂತೆ ಮಾಡಿದೆ ಎನ್ನಲಾಗಿದೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು ಅಹಿಂದಾ ಸಮರ್ಥನೆಯಿಂದಾಗಿದ್ದು, ಸಿದ್ದರಾಮಯ್ಯ ಅವರ ನಂತರ ದಲಿತ ನಾಯಕನಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬ ಅಭಿಪ್ರಾಯವನ್ನು ಸಿದ್ದರಾಮಯ್ಯ ಬಣವು ಮುಂದಿರಿಸಿದೆ. ಈ ಹಿನ್ನೆಲೆಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಮುಂದಿರಿಸುವ ತಂತ್ರ ರೂಪಿಸಲಾಗುತ್ತಿದ್ದಾರೆಂದು ಹೇಳಲಾಗುತ್ತಿದೆ.
ಈ ನಡುವೆ ಸತೀಶ್ ಜಾರಕಿಹೊಳಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ತಾವು ಸ್ಪರ್ಧೆಯಲ್ಲಿಲ್ಲ ಎಂದು ಸ್ಪಷ್ಟಪಡಿಸಿದ್ದು, ಪಕ್ಷದ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳುತ್ತದೆ ಎಂದಿದ್ದಾರೆ. ಗೊಂದಲ ನಿವಾರಣೆ ಅಷ್ಟೇ ಸ್ಥಾನ ಬದಲಾವಣೆ ಇಲ್ಲ. ಪಕ್ಷದಲ್ಲಿ, ಕಾರ್ಯಕರ್ತರಲ್ಲಿ ಹಾಗೂ ನಾಯಕರಲ್ಲಿ ಗೊಂದಲವಿದ್ದು, ಅದು ನಿವಾರಣೆ ಆಗಬೇಕು. ಎಲ್ಲಾ ರೀತಿಯ ಚರ್ಚೆಗಳಾಗಿವೆ. ಎಲ್ಲರೂ ಸಿಎಂ ಆಗಲು ಸಾಧ್ಯವಿಲ್ಲ. ಸೂಕ್ತ ಸಮಯದಲ್ಲಿ ಹೈಕಮಾಂಡ್ ನಿರ್ಧಾರ ಮಾಡುತ್ತೆ. ಈಗಂತೂ ಸಿಎಂ ಇದ್ದಾರೆ. ಬದಲಾವಣೆ ಹೈಕಮಾಂಡ್‌ಗೆ ಬಿಟ್ಟಿದ್ದು ಎಂದು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಸಿಎಂ ಟ್ವೀಟ್ ವಿಚಾರವಾಗಿ ಪ್ರತಿಕ್ರಿಯಿಸಿ, ಟ್ವೀಟ್ ಮಾಡಿದ್ದ ಬಗ್ಗೆ ಅವರೇ ಹೇಳಬೇಕು. ಪಕ್ಷದಲ್ಲಿ ಸಮಸ್ಯೆ ಇದೆ. ಸರಿಯಾಗುತ್ತಾ ಇರುತ್ತದೆ ಎಂದರಲ್ಲದೇ, ಬಿಜೆಪಿ ಅವರು ಭ್ರಷ್ಟಾಚಾರದ ಬಗ್ಗೆ ಬೇರೆಯವರ ಮೇಲೆ ಆರೋಪ ಮಾಡುತ್ತಾರೆ. ಅವರ ಎಂಎಲ್‌ಎ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಅವರೇ ತಮ್ಮ ಭ್ರಷ್ಟಾಚಾರದ ಬಗ್ಗೆ ಸಾಕ್ಷಿ ಕೊಟ್ಟಿದ್ದಾರೆ ಎಂದು ತಿರುಗೇಟು ಕೊಟ್ಟಿದ್ದಾರೆ.
ಈ ನಡುವೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಮಾತನಾಡಿ, ಕಾಂಗ್ರೆಸ್ ಹೊರತುಪಡಿಸಿ ಮತ್ತಾವ ಪಕ್ಷ ದಲಿತನನ್ನು ಮುಖ್ಯಮಂತ್ರಿ ಮಾಡುತ್ತದೆ? ಸಮಯ ಬಂದಾಗ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರಲ್ಲದೆ, ಸಿದ್ದರಾಮಯ್ಯ ಕೂಡ ಸಾಮಾಜಿಕ ನ್ಯಾಯವೇ ತಮ್ಮ ರಾಜಕೀಯದ ಮೂಲ ಎಂದು ಪುನರುಚ್ಚರಿಸಿದ್ದಾರೆ.
ಇದಕ್ಕೆ ವಿರುದ್ಧವಾಗಿ, ಕರ್ನಾಟಕ ಕಾಂಗ್ರೆಸ್ ಡಿಕೆ ಶಿವಕುಮಾರ್ ಅವರನ್ನು ಸಿದ್ದರಾಮಯ್ಯ ಅವರ ಏಕೈಕ ಪರ್ಯಾಯ ನಾಯಕನಂತೆ ಬಿಂಬಿಸುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿದ್ದು, ಮನ ಗೆದ್ದ ಜನನಾಯಕ ಎಂದು ಹೇಳಿದೆ. ಇಂದು ಪಕ್ಷದ ಆಂತರಿಕ ವಲಯದಲ್ಲಿ ನಾಯಕತ್ವ ಪೈಪೋಟಿ ತೀವ್ರಗೊಂಡಿರುವುದನ್ನು ಬಹಿರಂಗಪಡಿಸಿದೆ.



