ಮೈಸೂರು: ಉತ್ತಮ ಪ್ರದರ್ಶನ ನೀಡಿದ ಡಿ.ಪಾಲ್ ಪ್ರಥಮ ದರ್ಜೆ ಕಾಲೇಜು ತಂಡ ಚೀಫ್ ಜೆಸ್ಟೀಸ್ ಹೊಂಬೇಗೌಡ ಸ್ಮಾರಕ ಮೈಸೂರು ವಿಶ್ವವಿದ್ಯಾಲಯ ಅಂತರ ಕಾಲೇಜು ಗೋಲ್ಡ್ ಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು.
ಮೈಸೂರು ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ವಿಭಾಗ ಹಾಗೂ ಫಿಸಿಕಲ್ ಎಜುಕೇಷನ್ ಟೀಚರ್‍ಸ್ ಅಕಾಡೆಮಿ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಮೈಸೂರು ವಿವಿ ಫುಟ್‌ಬಾಲ್ ಮೈದಾನದಲ್ಲಿ ಪ್ರಾರಂಭವಾದ ಟೂರ್ನಿಯ ನಾಕೌಟ್ ಪಂದ್ಯದಲ್ಲಿ ಸೇಪಿಯೆಂಟ್ ಪ್ರಥಮ ದರ್ಜೆ ಕಾಲೇಜು ವಿರುದ್ಧ ೧-೦ ಗೋಲುಗಳಿಂದ ಗೆಲುವು ಪಡೆಯಿತು.
ಮತ್ತೊಂದು ಪಂದ್ಯದಲ್ಲಿ ಮಂಡ್ಯದ ಪಿಇಎಸ್ ಸೈನ್ಸ್ ಅಂಡ್ ಕಾರ್ಮರ್‍ಸ್ ತಂಡ ೪-೧ ಗೋಲುಗಳಿಂದ ಕುವೆಂಪು ನಗರದ ಪ್ರಥಮ ದರ್ಜೆ ಕಾಲೇಜು ವಿರುದ್ಧ ಜಯ ಸಾಧಿಸಿತು. ಉಳಿದ ಪಂದ್ಯದಲ್ಲಿ ಕ್ರೈಸ್ಟ್ ಪ್ರಥಮ ದರ್ಜೆ ಕಾಲೇಜು ತಂಡ ೧-೦ ಗೋಲುಗಳಿಂದ ಊಟಿ ರಸ್ತೆಯ ಜೆಎಸ್‌ಎಸ್ ಕಾಲೇಜು ವಿರುದ್ಧ ಹಾಗೂ ಮೈಕಾ ತಂಡ ೨-೦ ಗೋಲುಗಳಿಂದ ಮಹಾರಾಜ ಕಾಲೇಜು ವಿರುದ್ಧ ಜಯ ಸಾಧಿಸಿತು.
ಇದಕ್ಕೂ ಮುನ್ನ ನಡೆದ ಕಾರ್ಯಕ್ರಮದಲ್ಲಿ ವಿವಿಯ ದೈಹಿಕ ಶಿಕ್ಷಣ ವಿಭಾಗದ ನಿವೃತ್ತ ನಿರ್ದೇಶಕ, ಫಿಸಿಕಲ್ ಎಜುಕೇಷನ್ ಟೀಚರ್‍ಸ್ ಅಕಾಡೆಮಿ ಟ್ರಸ್ಟ್ ಅಧ್ಯಕ್ಷ ಡಾ.ಸಿ.ಕೃಷ್ಣ ಟೂರ್ನಿಗೆ ಚಾಲನೆ ನೀಡಿದರು. ಬಳಿಕ ಮಾತನಾಡಿ, ಕ್ರೀಡೆಯಿಂದ ದೈಹಿಕ ಮತ್ತು ಬೌದ್ಧಿಕ ಬೆಳವಣಿಗೆಯಾಗಲಿದು, ವಿದ್ಯಾರ್ಥಿಗಳು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ಕ್ರೀಡೆಗಳಿಂದ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ. ಪ್ರತಿಯೊಬ್ಬರೂ ಒಂದಲ್ಲ ಒಂದು ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಮನಸ್ಸು ಉಸಭರಿತವಾಗಿರುತ್ತದೆ. ಸದೃಢ ದೇಹ ಮತ್ತು ಸದೃಢ ಮನಸ್ಸು ನಿರ್ಮಾಣಗೊಳ್ಳಲಿದ್ದು, ವಿದ್ಯಾರ್ಥಿಗಳು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಹೆಚ್ಚಿನ ಲಾಭ ದೊರೆಯುತ್ತದೆ ಎಂದರು.
ದೈಹಿಕ ಶಿPಣ ವಿಭಾಗದ ಪ್ರಭಾರ ನಿರ್ದೇಶಕ ಡಾ.ಸಿ.ವೆಂಕಟೇಶ್, ಉಪ ನಿರ್ದೇಶಕ ಡಾ.ಪಿ.ಕೃಷ್ಣಯ್ಯ, ಫಿಸಿಕಲ್ ಎಜ್ಯುಕೇಷನ್ ಟೀಚರ್ಸ್ ಅಕಾಡೆಮಿ ಟ್ರಸ್ಟ್‌ನ ಕಾರ್ಯದರ್ಶಿ ಡಾ.ಬಿ.ಸದಾಶಿವ ಭಟ್, ಸಂಚಾಲಕ ಡಾ.ಎಚ್.ಎಸ್.ಕೃಷ್ಣಕುಮಾರ್, ಜಿಲ್ಲಾ ಫುಟ್‌ಬಾಲ್ ಸಂಸ್ಥೆಯ ಕಾರ್ಯದರ್ಶಿ ಮಂಜುನಾಥ್ ಇತರರು ಹಾಜರಿದ್ದರು. ಟೂರ್ನಿ ಜೂ.೨೮ರವರೆಗೆ ನಡೆಯಲಿದೆ. ಮೈಸೂರು, ಮಂಡ್ಯ ಜಿಲ್ಲೆಗಳಿಂದ ೧೨ ತಂಡಗಳು ಭಾಗಿಯಾಗಿವೆ. ಟೂರ್ನಿಯು ನಾಕೌಟ್ ಕಂ ಲೀಗ್ ಮಾದರಿಯಲ್ಲಿ ನಡೆಯುತ್ತಿರುವುದು ವಿಶೇಷ.