ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯರವರ ಆಪ್ತರು ಮೈಸೂರು ಭಾಗದವರೇ ಆದ ದಕ್ಷಿಣ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡರಿಗೆ ಮೊದಲ ಪ್ರಾಶಸ್ತ್ಯದ ಮತ ನೀಡುವ ಮೂಲಕ ಆಯ್ಕೆ ಮಾಡಬೇಕೆಂದು ವರುಣಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಆಶ್ರಯ ಸಮಿತಿ ಅಧ್ಯಕ್ಷ ಡಾ. ಯತೀಂದ್ರ ಸಿದ್ದರಾಮಯ್ಯ ಮನವಿ ಮಾಡಿದರು.
ವರುಣಾ ಕ್ಷೇತ್ರದ ಸುತ್ತೂರು, ಹೊಸಕೋಟೆ, ತಾಂಡವಪುರ, ಮಲ್ಲೂಪುರ, ತಗಡೂರು, ದಾಸನೂರು, ಕಾರ್ಯ ಗ್ರಾಮದ ಪ್ರೌಢಶಾಲೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡರ ಪರವಾಗಿ ಮತಯಾಚಿಸಿ ಮಾತನಾಡಿದ ಅವರು ನಾಲ್ಕು ಬಾರಿ ದಕ್ಷಿಣ ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸಿ ಆಯ್ಕೆಯಾಗಿ ೫ನೇ ಬಾರಿಗೆ ಆಯ್ಕೆ ಬಯಸಿದ್ದಾರೆ. ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸದನದ ಒಳಗೆ ಮತ್ತು ಸದನದ ಹೊರಗೆ ಹೋರಾಟ ಮಾಡಿ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಿದ್ದಾರೆ.
ಶಿಕ್ಷಣ ಕ್ಷೇತ್ರದ ಘನತೆ ಮತ್ತು ಶಿಕ್ಷಕರ ಆತ್ಮಗೌರವಕ್ಕೆ ಚ್ಯುತಿಯಾಗದಂತೆ ದುಡಿಯುತ್ತ ಬಂದಿರುವ ಅವರ ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ನಿಷ್ಕಳಂಕ ವ್ಯಕ್ತಿತ್ವವೇ ಅವರ ಮರು ಆಯ್ಕೆಗೆ ಮಾನದಂಡಗಳಾಗಿವೆ. ಕಾಂಗ್ರೆಸ್ ಸರ್ಕಾರ ಹಳೆ ಪಿಂಚಣಿ ಯೋಜನೆ (ಓಪಿಎಸ್) ಯನ್ನು ಜಾರಿಗೆ ತರಲು ಚಿಂತನೆ ನಡೆಸಿದೆ. ಶಿಕ್ಷಕರ ನೇಮಕಾತಿ, ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ ಹೀಗೆ ಕಾಂಗ್ರೆಸ್ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದ್ದು, ಶಿಕ್ಷಕರ ಹಿತಕಾಯಲು ಸರ್ಕಾರ ಬಾದ್ಯವಾಗಿದ್ದು ಶಿಕ್ಷಕ ಬಂಧುಗಳು ಮರಿತಿಬ್ಬೇಗೌಡರನ್ನು ಹೆಚ್ಚುಮತಗಳ ಅಂತರದಿಂದ ಆಯ್ಕೆ ಮಾಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ. ಕಾರ್ಯದರ್ಶಿ ಎಸ್.ಸಿ. ಬಸವರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ, ರಮೇಶ್ ಮುದ್ದೇಗೌಡ, ಮುಖಂಡರಾದ ದಕ್ಷಿಣಾಮೂರ್ತಿ, ಕೃಷ್ಣಕುಮಾರ್ ಸಾಗರ್, ಲಲಿತಾದ್ರಿಪುರ ಬಸವರಾಜು, ರವಿಕುಮಾರ್, ಸೋಮಣ್ಣ, ಮಲ್ಲೂಪುರ ಪ್ರಕಾಶ್, ಸುರೇಶ್‌ಬಾಬು ಹಾಜರಿದ್ದರು.