ಮೈಸೂರು: ಜೆಎಸ್ ಎಸ್ ಮಹಾವಿದ್ಯಾಪೀಠದ ವತಿಯಿಂದ ನೀಡಲಾಗುವ ೨೦೨೨ನೇ ಸಾಲಿನ “ವಚನ ಚಿತ್ರರಚನಾ ಪಿತಾಮಹ ಎಂ. ವೀರಪ್ಪದತ್ತಿ ಪ್ರಶಸ್ತಿ”ಗೆ ಕಿರಣ್ ಸುಬ್ಬಯ್ಯನವರು ಭಾಜನರಾಗಿರುತ್ತಾರೆ. ಪ್ರಶಸ್ತಿ ಪುರಸ್ಕೃತರಿಗೆ ೬೮,೦೦೦ ರೂ.ಗಳ ಪ್ರಶಸ್ತಿ ಧನ, ಸ್ವಸ್ತಿವಾಚನ ಹಾಗೂ ಪ್ರಶಸ್ತಿಫಲಕವನ್ನು ನೀಡಿ ಪುರಸ್ಕರಿಸಲಾಗುವುದು.
ಕರಕುಶಲ ಶಿಲ್ಪಕಲಾವಿದರಾದ ಕಿರಣ್ ಸುಬ್ಬಯ್ಯನವರು ಕೊಡಗಿನ ಪಾರಾಣಿ ಗ್ರಾಮದ ಅಪ್ಪನೆರವಂಡ ಕುಟುಂಬಕ್ಕೆ ಸೇರಿದವರು. ಮೈಸೂರಿನ ಚಾಮರಾಜೇಂದ್ರ ವೃತ್ತಿ ಶಿಕ್ಷಣ ಶಾಲೆಯಲ್ಲಿ ಶಿಲ್ಪಕಲೆ ಅಭ್ಯಾಸ ಮಾಡಿರುವರು, ಶಿಕ್ಷಣದ ನಂತರ ಶಿಲ್ಪಗಳ ಕೆತ್ತನೆಯಲ್ಲಿ ಹೊಸ ಶೈಲಿಯನ್ನು ರೂಪಿಸುವ ಉದ್ದೇಶದಿಂದ ಹಲವಾರು ವರ್ಷ ಪರಿಶ್ರಮ ಪಟ್ಟು ಹೊಸ ಮಾದರಿಯ ಶಿಲ್ಪಗಳನ್ನು ರಚಿಸಿದ್ದಾರೆ. ಒಂದೇ ಕಲ್ಲಿನಲ್ಲಿ ಎರಡು, ಮೂರು, ನಾಲ್ಕು, ಐದು ಆಯಾಮಗಳಲ್ಲಿ ನೋಡಬಹುದಾದ ಶಿಲ್ಪಗಳು ಇವರ ವೈಶಿಷ್ಟö್ಯ. ಒಟ್ಟಾರೆ ೨೧೨ ಶಿಲ್ಪಗಳಲ್ಲಿ ೬೫೫ ಬಗೆಯ ಇಂಥ ವಿಸ್ಮಯಕರವಾದ ನೋಟವನ್ನು ಕಾಣಬಹುದು. ಇಂತಹ ಬಹುಮುಖಿ ಶಿಲ್ಪಗಳು ಮೈಸೂರಿನ ಬಂಬೂ ಬಜಾರ್ ಸರ್ಕಲ್‌ನ K.S. Museum of Sculpture ಗ್ಯಾಲರಿಯಲ್ಲಿವೆ. ಸಾಂಪ್ರದಾಯಿಕ ಶಿಲ್ಪಗಳ ನೆಲೆಯಲ್ಲಿ ೧೩೫ ಹೆಡೆಗಳ ಆದಿಶೇಷನನ್ನು ಕಂಡರಿಸಿರುವುದು ಗಿನ್ನಿಸ್‌ದಾಖಲೆಗೆ ಸೇರಲುಅರ್ಹವಾಗಿದೆ. ಇವಲ್ಲದೆ ಅನೇಕ ದೇವತಾ ವಿಗ್ರಹಗಳನ್ನು ಮಾಡಿದ್ದಾರೆ. ವಿವಿಧ ಬಗೆಯ ಅಲಂಕಾರಿಕ ಸ್ತಂಭ, ಸ್ತೂಪ, ಪೀಠ ಮತ್ತು ನವ ನವೋನ್ಮೇಷ ಶಾಲಿಯಾದ ಪ್ರದರ್ಶ£ ಮೂರ್ತಿಗಳನ್ನು ಕೆತ್ತಿದ್ದಾರೆ.
ಚಿತ್ರಕಲೆಯಲ್ಲಿ ರಾಷ್ಟçಮಟ್ಟದಲ್ಲಿ ಸಾಧನೆ ಮಾಡಿರುವ ಕಲಾವಿದರನ್ನು ಪ್ರೋತ್ಸಾಹಿಸುವ ಸಲುವಾಗಿ ಮೈಸೂರು ಟಾಯ್ಸ್ ಕಂಪನಿಯ ಸ್ಥಾಪಕರೂ, ಖ್ಯಾತಚಿತ್ರ ಕಲಾವಿದರೂ ಆದ ಶ್ರೀ ಎಂ. ವೀರಪ್ಪನವರ ಹೆಸರಿನಲ್ಲಿ ಅವರ ಮಕ್ಕಳಾದ ಪ್ರಪುಲ್ಲಚಂದ್ರರವರು ಹಾಗೂ ಅವರ ಮೊಮ್ಮಕ್ಕಳಾದ ಸತೀಶ್ ಪ್ರಪುಲ್ಲಚಂದ್ರ, ಜೆಎಸ್‌ಎಸ್ ಮಹಾವಿದ್ಯಾಪೀಠದಲ್ಲಿ ದತ್ತಿಯನ್ನು ಸ್ಥಾಪಿಸಿದ್ದಾರೆ. ಅದರ ಆಶ್ರಯದಲ್ಲಿ ೨೦೧೫ರಿಂದಲೂ ಶ್ರೇಷ್ಠ ಕಲಾವಿದರುಗಳಿಗೆ ಪ್ರತಿ ವರ್ಷ ಪ್ರಶಸ್ತಿ ನೀಡಿಗೌರವಿಸಲಾಗುತ್ತಿದೆ. ಸದ್ಯದಲ್ಲಿಯೇ ಏರ್ಪಡಿಸುವ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಲಾಗುವುದು.