ಗುಂಡ್ಲುಪೇಟೆ: ಬಂಡೀಪುರ ಹುಲಿ ಯೋಜನೆ ನಿರ್ದೇಶಕ ರಮೇಶಕುಮಾರ್ ಅವರನ್ನು ಸರ್ಕಾರ ಈ ಕೂಡಲೇ ವರ್ಗಾವಣೆ ಮಾಡುವಂತೆ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಮಾಡ್ರಹಳ್ಳಿ ಮಹದೇವಪ್ಪ ಒತ್ತಾಯಿಸಿದರು.
ಪಟ್ಟಣ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು, ರಮೇಶಕುಮಾರ್ ಬಂಡೀಪುರ ಹುಲಿ ಯೋಜನೆ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ ಇಲ್ಲಿಯ ತನಕ ಕೋಟ್ಯಾಂತರ ರೂ. ಭ್ರಷ್ಟಾಚಾರ ಮಾಡಿದ್ದಾರೆ. ವಿವಿಧ ಯೋಜನೆಯಡಿ ಹಣ ದುರುಪಯೋಗ ಮಾಡಿ, ಟೆಂಡರ್ ಪ್ರಕ್ರಯೆ ನಡೆಸದೆ ಹಣ ಡ್ರಾ ಮಾಡಿದ್ದಾರೆ. ಇದು ಕಾನೂನು ಭಾಹೀರವಾಗಿದ್ದು, ಕೂಡಲೇ ಇವರನ್ನು ವರ್ಗಾವಣೆ ಅಥವಾ ಅಮಾನತ್ತು ಪಡಿಸುವ ಮೂಲಕ ಸೂಕ್ತ ತನಿಖೆ ನಡೆಸಿ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ್ದರು.
ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಂಡೀಪುರದಲ್ಲಿ ನಡೆದಿರುವ ಭ್ರಷ್ಟಾಚಾರದ ಕುರಿತು ದಾಖಲೆಗಳ ಸಮೇತ ಪ್ರತಿಭಟನೆ ನಡೆಸಲಾಗಿತ್ತು. ಆ ಸಂದರ್ಭದಲ್ಲಿ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ರಮೇಶಕುಮಾರ್ ವಿರುದ್ಧ ಕ್ರಮ ವಹಿಸುವಂತೆ ಅಧಿಕಾರಿಗಳು ಸಹ ಭರವಸೆ ನೀಡಿದ್ದರು. ಆದರೆ ಸರ್ಕಾರ ಬದಲಾದ ನಂತರ ರಮೇಶಕುಮಾರ್ ಬಂಡೀಪುರದಲ್ಲೆ ಮುಂದುವರೆದಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಈಗಾಗಲೇ ಬಂಡೀಪುರದಲ್ಲಿ ನಡೆದಿರುವ ಭ್ರಷ್ಟಾಚಾರದ ಕುರಿತು ಮುಖ್ಯಮಂತ್ರಿಗಳು, ಅರಣ್ಯ ಸಚಿವ ಈಶ್ವರ್ ಖಂಡ್ರೆ, ಶಾಸಕ ಎಚ್.ಎಂ.ಗಣೇಶಪ್ರಸಾದ್ ಗಮನಕ್ಕೆ ತರಲಾಗಿದೆ. ಅವರೂ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಜೊತೆಗೆ ಲೋಕಾಯುಕ್ತರಿಗೂ ಸಹ ದೂರು ನೀಡಲಾಗಿದೆ. ಈ ಹಿನ್ನೆಲೆ ಅರಣ್ಯಾಧಿಕಾರಿಗಳ ವಿರುದ್ಧ ಜು.3ರ ಸೋಮವಾರ ಸಾಂಕೇತಿಕವಾಗಿ ಅರಣ್ಯಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು. ಅದಾಗ್ಯೂ ರಮೇಶಕುಮಾರ್ ವರ್ಗವಣೆ ಮಾಡದಿದ್ದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸರ್ಕಾರವು ಈಗಾಗಲೇ 15 ರಿಂದ 18 ಮಂದಿ ಐಎಫ್‍ಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಆದರೆ ಭ್ರಷ್ಟಾಚಾರದಲ್ಲಿ ಮುಳುಗಿರುವ ರಮೇಶಕುಮಾರ್ ಅವರನ್ನು ಏಕೆ ವರ್ಗಾವಣೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿ, ರಮೇಶಕುಮಾರ್ ಬಂಡೀಪುರದಲ್ಲೆ ಕೆಲಸ ನಿರ್ವಹಿಸಿದರೆ ಸರ್ಕಾರದ ಹಣ ದುರುಪಯೋಗ ಭ್ರಷ್ಟಾಚಾರದ ಕೂಪವಾಗುತ್ತದೆ. ಆದ್ದರಿಂದ ಬಂಡೀಪುರ ಉಳಿಯಬೇಕಾದರೆ ರಮೇಶಕುಮಾರ್ ವರ್ಗಾವಣೆ ಮಾಡಿ ಎಂದು ಒತ್ತಾಯಿಸಿದರು.
ಗೋಷ್ಟಿಯಲ್ಲಿ ರೈತ ಮುಖಂಡರಾದ ಹಾಲಹಳ್ಳಿ ಮಹೇಶ್, ಷಣ್ಮುಖಸ್ವಾಮಿ ಸೇರಿದಂತೆ ಇತರರು ಹಾಜರಿದ್ದರು.