ಯಳಂದೂರು ಜೂ ೦೯ : ಕಾಡಾನೆ ದಾಳಿ ನಡೆಸಿ ಬಾಳೆ ಫಸಲನ್ನು ನಾಶಗೊಳಿಸಿದ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆಗಾಗಿ ಬಂದಿದ್ದ ಆರ್‌ಎಫ್‌ಒ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗೆ ರೈತರು ದಿಗ್ಬಂಧನ ಹಾಕಿರುವ ಘಟನೆ ಶುಕ್ರವಾರ ತಾಲೂಕಿನ ಯರಗಂಬಳ್ಳಿ ಗ್ರಾಮದಲ್ಲಿ ಜರುಗಿದೆ.
ಬಿಆರ್‌ಟಿ ಹುಲಿ ರಕ್ಷಿತ ಅರಣ್ಯ ಪ್ರದೇಶದ ತಪ್ಪಲಿನಲ್ಲೇ ಇರುವ ಯರಗಂಬಳ್ಳಿ ಗ್ರಾಮದ ಜಮೀನುಗಳಿಗೆ ಕಾಡಾನೆ, ಕಾಡುಹಂದಿ, ಜಿಂಕೆ, ಕಡವೆ, ಕಾಡುಕುರಿಗಳು ದಾಳಿ ನಡೆಸಿ ಫಸಲನ್ನು ನಾಶಗೊಳಿಸುವ ಪ್ರಕ್ರಿಯೆ ದಿನನಿತ್ಯ ನಡೆಯುತ್ತಿದೆ. ಇಲ್ಲಿನ ಮಹದೇವಸ್ವಾಮಿ ಎಂಬುವವರಿಗೆ ಸೇರಿದ ಸರ್ವೆನಂ. ೨೨೨/೪ ಹಾಗೂ ೨೨೩/೧ ರಲ್ಲಿ ಒಂದೂವರೆ ಎಕರೆ ಜಮೀನಿನಲ್ಲಿ ಬೆಳೆದಿದ್ದ ೬ ತಿಂಗಳ ೫೦೦ ರಿಂದ ೬೦೦ ನೇಂದ್ರ ತಳಿಯ ಬಾಳೆಯ ಗಿಡಗಳನ್ನು ಐದಾರು ಕಾಡಾನೆಗಳ ಹಿಂಡು ಬಂದು ಮೇಯ್ದಿದೆ. ಈ ಹಿಂದೆ ಮಾರ್ಚ್ನಲ್ಲಿ ೨ ತಿಂಗಳ ಗಿಡಗಳಾಗಿದ್ದಾಗಲೂ ಕಾಡಾನೆಗಳು ದಾಳಿ ನಡೆಸಿ ೪೦೦ಕ್ಕೂ ಹೆಚ್ಚು ಗಿಡಗಳನ್ನು ನಾಶಪಡಿಸಿತ್ತು. ಈ ಬಗ್ಗೆ ದೂರನ್ನೂ ನೀಡಿದ್ದರೂ ಇನ್ನೂ ಪರಿಹಾರ ಸಿಕ್ಕಿಲ್ಲ. ಈಗ ಮತ್ತೆ ಆನೆಗಳ ಹಿಂಡು ಫಸಲನ್ನು ನಾಶಮಾಡಿವೆ. ತಾವು ಇದಕ್ಕಾಗಿ ಒಂದೂವರೆ ಲಕ್ಷ ರೂ. ಸಾಲ ಮಾಡಿದ್ದು, ರುಚಿ ಕಂಡಿರುವ ಆನೆಗಳು ಮತ್ತೆ ಇಲ್ಲಿ ದಾಳಿ ನಡೆಸುವ ಸಾಧ್ಯತೆಗಳು ಹೆಚ್ಚಿವೆ. ಇದಕ್ಕೆಲ್ಲಾ ಅರಣ್ಯ ಇಲಾಖೆಯ ನಿರ್ಲಕ್ಷವೇ ಕಾರಣ ಎಂದು ದೂರಿದ್ದಾರೆ.
ಈ ಬಗ್ಗೆ ದೂರು ಸಲ್ಲಿಸಿದ ಬಳಿಕ ಬೆಳಿಗ್ಗೆ ಸ್ಥಳಕ್ಕೆ ಆಗಮಿಸಿದ ಆರ್‌ಎಫ್‌ಒ ಲೋಕೇಶ್‌ಮೂರ್ತಿ ಹಾಗೂ ಇವರ ಸಿಬ್ಬಂದಿಗೆ ಇಲ್ಲಿನ ರೈತರು ದಿಗ್ಬಂಧನ ಹಾಕಿದ್ದಾರೆ. ಕೂಡಲೇ ಸ್ಥಳದಲ್ಲಿ ಪರಿಹಾರದ ಹಣವನ್ನು ನೀಡಬೇಕು. ಇಲ್ಲವೆ ಲಿಖಿತ ರೂಪದ ಭರವಸೆ ನೀಡಬೇಕು, ಇಲ್ಲವಾದಲ್ಲಿ ಮೇಲಾಧಿಕಾರಿಗಳನ್ನು ಕರೆಯಿಸಬೇಕು ಎಂದು ಆಗ್ರಹಿಸಿ ಅರಣ್ಯ ಇಲಾಖೆಯ ಜೀಪ್ ತಡೆದು ಸಂಜೆವರೆವಿಗೂ ದಿಗ್ಬಂಧನ ಹಾಕಿದರು.
ಈ ಸಂದರ್ಭದಲ್ಲಿ ರೈತರಾದ ಸಿದ್ಧು, ನಾಗೇಗೌಡ, ಸಿದ್ದರಾಜು, ಕುಮಾರ, ಮಹೇಶಪ್ಪ, ತ್ಯಾಗರಾಜು, ರವಿ, ಮಹೇಶ್, ವಿರೂಪಾಕ್ಷ ಸೇರಿದಂತೆ ಅನೇಕರು ಇದ್ದರು.