ಹಾಸನ: ಆಲೂರು ತಾಲೂಕು ಹೆಮ್ಮಿಗೆ ಗ್ರಾಮದಲ್ಲಿ ಇಂದು ಗುರುವಾರ ಬೆಳಗ್ಗೆ ಕಾಡಾನೆಯೊಂದು ಕಾಣಿಸಿಕೊಂಡಿದ್ದು ಕೆಎಸ್‌ಆರ್‌ಟಿಸಿ ಬಸ್ ಚಾಲಕ ಮತ್ತು ನಿರ್ವಾಹಕ ಕೂದಲೆಳೆ ಅಂತರದಲ್ಲಿ ಪಾರಾಗಿರುವ ಘಟನೆ ನಡೆದಿದೆ. ಹೆಮ್ಮಿಗೆ ಗ್ರಾಮದ ಜೀವನ್ ಎಂಬುವರ ಮನೆಯಲ್ಲಿ ಅಳವಡಿಸಿರುವ ಸಿಸಿಟಿವಿಯಲ್ಲಿ ಘಟನೆಯ ದೃಶ್ಯ ಸೆರೆಯಾಗಿದೆ. ಕಾಡಾನೆ ನೋಡಿರುವ ಗ್ರಾಮಸ್ಥರು ಇದು ಭೀಮ ಆನೆ ಎಂದು ಹೇಳುತ್ತಿದ್ದಾರೆ. ಇನ್ನು ಹೆಮ್ಮಿಗೆ ಗ್ರಾಮದ ಸುತ್ತಮುತ್ತ ಕಳೆದ ಒಂದು ವಾರದಿಂದ ೧೩ಕ್ಕೂ ಹೆಚ್ಚು ಆನೆಗಳು ಬೀಡು ಬಿಟ್ಟಿದ್ದು, ರೈತರು ಆತಂಕದಿಂದ ತೋಟದ ಕೆಲಸಗಳಿಗೆ ಹೆಜ್ಜೆ ಹಾಕುತ್ತಿದ್ದಾರೆ.
ಗ್ರಾಮದ ಸುತ್ತಮುತ್ತ ಕಾಫಿ, ಅಡಿಕೆ ಮತ್ತು ಭತ್ತದ ಗದ್ದೆ ಹಾಗೂ ಇತರೆ ಬೆಳೆಗಳನ್ನು ಕಾಡಾನೆಯ ಹಿಂಡು ನಾಶ ಮಾಡುತ್ತಿದ್ದು ಸುತ್ತ ಮುತ್ತಲಿನ ಜನರಲ್ಲಿ ಆತಂಕ ಸೃಷ್ಟಿ ಆಗಿದೆ ಎಂದು ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ, ಜೀವನ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಆನೆಯನ್ನು ಕಂಡಿರುವ ಗ್ರಾಮಸ್ಥರು ಆದಷ್ಟು ಬೇಗ ಆನೆಯನ್ನು ಸೆರೆಹಿಡಿಯುವಂತೆ ಮನವಿ ಮಾಡುತ್ತಿದ್ದಾರೆ. ಊರೊಳಗೆ ಕಾಲಿಟ್ಟಿರುವ ಆನೆ ಮನಬಂದಂತೆ ತಿರುಗಾಡುವ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದು.