ಬೆಂಗಳೂರು: ರಾಜ್ಯದಲ್ಲಿ ನರ್ಸಿಂಗ್ ಕಾಲೇಜುಗಳ ಶುಲ್ಕ ನಿಯಂತ್ರಣಕ್ಕೆ ಪ್ರಾಧಿಕಾರ ರಚಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ ಅವರು ಹೇಳಿದರು.
ವಿಕಾಸಸೌಧದಲ್ಲಿ ಇಲಾಖೆ ಅಧಿಕಾರಿಗಳ ಜತೆ ನಡೆಸಿದ ಸಭೆಯಲ್ಲಿ ಈ ವಿವರ ನೀಡಿದರು. ‘ನರ್ಸಿಂಗ್ ಕಾಲೇಜುಗಳಲ್ಲಿ ಅಧಿಕ ಶುಲ್ಕ ವಸೂಲು ಮಾಡುತ್ತಿರುವ ಬಗ್ಗೆ ನಮ್ಮ ಕಚೇರಿಗೆ ಹಲವಾರು ದೂರುಗಳು ಸಲ್ಲಿಕೆಯಾಗಿವೆ. ಇದರಿಂದ ವಿದ್ಯಾರ್ಥಿಗಳಿಗೆ ಹಣಕಾಸಿನ ಹೊರೆ ಆಗುತ್ತಿದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯ ಜಂಟಿ ಕಾರ್ಯದರ್ಶಿಗಳ ನೇತೃತ್ವದಲ್ಲಿ ೫ ಸದಸ್ಯರ ಶುಲ್ಕ ನಿಯಂತ್ರಣ ಪ್ರಾಧಿಕಾರ ರಚಿಸಲಾಗುವುದು ಎಂದು ಹೇಳಿದರು.
ನರ್ಸಿಂಗ್ ಕಾಲೇಜುಗಳ ಶುಲ್ಕಗಳನ್ನು ಪರಿಶೀಲಿಸುವ ಕಾರ್ಯವನ್ನು ಈ ಪ್ರಾಧಿಕಾರಕ್ಕೆ ವಹಿಸಲಾಗುವುದು ಎಂದ ಸಚಿವರು, ಸರ್ಕಾರ ನಿಗದಿಪಡಿಸಿರುವುದಕ್ಕಿಂತಲೂ ಹೆಚ್ಚು ಶುಲ್ಕ ವಸೂಲು ಮಾಡುತ್ತಿರುವ ಸಂಸ್ಥೆಗಳ ಪ್ರಮಾಣ ಪತ್ರಗಳನ್ನು ರದ್ದುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಈಗ ಸರ್ಕಾರಿ ಕೋಟಾದಡಿ ಪ್ರವೇಶ ಪಡೆಯುವ ವಿದ್ಯಾರ್ಥಿಗೆ ೧೦,೦೦೦, ಆಡಳಿತ ಮಂಡಳಿ ಕೋಟಾದಡಿ ಪ್ರವೇಶ ಪಡೆಯುವ ವಿದ್ಯಾರ್ಥಿಗೆ ೧ ಲಕ್ಷ ಮತ್ತು ಹೊರ ರಾಜ್ಯದವರಿಗೆ ೧.೪೦ ಲಕ್ಷ ಶುಲ್ಕ ಇದೆ. ಈ ಶುಲ್ಕವನ್ನು ಶೇ ೨೦ರಷ್ಟು ಹೆಚ್ಚಿಸಬೇಕು ಎಂದು ನರ್ಸಿಂಗ್ ಕಾಲೇಜುಗಳ ಆಡಳಿತ ಮಂಡಳಿ ಪ್ರತಿನಿಧಿಗಳು ಇತ್ತೀಚೆಗೆ ಮಾಡಿದ್ದ ಮನವಿಯನ್ನು ಸಚಿವರು ತಿರಸ್ಕರಿಸಿದರು. ಪ್ರಾಧಿಕಾರವು ಬಿಎಸ್‌ಸಿ ನರ್ಸಿಂಗ್, ಜನರಲ್ ನರ್ಸಿಂಗ್ ಮತ್ತು ಮಿಡ್‌ವೈಪ್ರೀ (ಜಿಎನ್‌ಎಂ) ಡಿಪ್ಲೊಮೊ ಕೋರ್ಸ್‌ಗಳ ಶುಲ್ಕದ ಬಗ್ಗೆಯೂ ನಿಗಾವಹಿಸಲಿದೆ ಎಂದರು.
ನರ್ಸಿಂಗ್ ಕಾಲೇಜುಗಳನ್ನು ನಡೆಸಲು ಅನುಮತಿ ಪಡೆದಿರುವ ಕಟ್ಟಡಗಳಲ್ಲಿ ನರ್ಸಿಂಗ್ ಕೋರ್ಸ್‌ಗಳನ್ನು ಮಾತ್ರ ನಡೆಸಬೇಕು. ಬೇರೆ ಯಾವುದೇ ಕೋರ್ಸ್‌ಗಳನ್ನು ನಡೆಸುತ್ತಿದ್ದರೆ ಅಂತಹ ಕಾಲೇಜುಗಳ ಅನುಮತಿ ಹಿಂಪಡೆಯಬೇಕು ಎಂದೂ ಪಾಟೀಲ ನಿರ್ದೇಶನ ನೀಡಿದರು.