ಬೆಂಗಳೂರು: ರಾಜಾಜಿನಗರ ಕ್ಷೇತ್ರದ ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ಅವರು ತೀವ್ರ ಜ್ವರದಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅವರನ್ನು ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸುರೇಶ್ ಕುಮಾರ್ ಅವರಿಗೆ ಮೆದುಳಿಗೆ ಜ್ವರ ತಗುಲಿರುವ ಬಗ್ಗೆ ಮಾಹಿತಿ ಕೇಳಿಬಂದಿದೆ. ಅಪರೂಪದ ಮ್ಯೂಟೆಂಟ್ ಚಿಕನ್ ಗುನ್ಯಾದಿಂದ ಬಳಲುತ್ತಿರುವ ಸುರೇಶ್ ಕುಮಾರ್ಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದ್ದು, ನಾಲ್ಕುವರೆ ಲಕ್ಷ ರೂಪಾಯಿಯ ನಾಲ್ಕು ಇಂಜೆಕ್ಷನ್ ನೀಡಲಾಗಿದೆ. ಇನ್ನೂ ಏಳು ದಿನಗಳ ಕಾಲ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ತಿಂಗಳು ಬೆಂಗಳೂರಿನಿಂದ ತಿರುಪತಿಗೆ ಸೈಕಲ್ ಪ್ರಯಾಣ ಬೆಳೆಸಿದ್ದ ಸುರೇಶ್‌ಕುಮಾರ್ ಬಳಿಕ ದೋಸ್ತಿ ಪಾದಯಾತ್ರೆಯಲ್ಲೂ ಒಂದು ದಿನ ಭಾಗಿ ಆಗಿದ್ದರು. ಆದ್ರೆ ಕಳೆದ 3-4 ದಿನಗಳ ಹಿಂದೆ ತೀವ್ರ ಜ್ವರಕ್ಕೆ ತುತ್ತಾಗಿದ್ದರು.
ಮಂಗಳವಾರ ರಾತ್ರಿ ಜ್ವರ ತೀವ್ರಗೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಐಸಿಯು ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.