ಬೆಂಗಳೂರು: ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಪುತ್ರಿ ಹಂಸ ಮೊಯ್ಲಿ (46) ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ ನಿಧನ ಹೊಂದಿದ್ದಾರೆ. ರಾಜಕೀಯದ ಕಾರ್ಯ ಹಿನ್ನೆಲೆ ಛತ್ತೀಸ್ಗಢ್ ಪ್ರವಾಸದಲ್ಲಿದ್ದ ವೀರಪ್ಪ ಮೊಯ್ಲಿ ವಿಷಯ ತಿಳಿಯುತ್ತಿದ್ದಂತೆ ರಾತ್ರಿಯೇ ಬೆಂಗಳೂರಿಗೆ ವೀರಪ್ಪ ಆಗಮಿಸಿದ್ದರು. ನಾಳೆ ಬೆಳಗ್ಗೆ ಪುತ್ರಿಯ ಅಂತ್ಯಸಂಸ್ಕಾರ ನಡೆಸಲು ತೀರ್ಮಾನಿಸಲಾಗಿದೆ.
ಹಂಸ ಮೊಯ್ಲಿ ಅವರು ಭರತನಾಟ್ಯ ಕಲಾವಿದೆ ಆಗಿದ್ದು, ಹಲವು ಕಾರ್ಯಕ್ರಮಗಳಲ್ಲಿ ತಮ್ಮ ಕಲೆ ಪ್ರದರ್ಶನ ನೀಡಿದ್ದರು. ಜೊತೆಗೆ ನೃತ್ಯ ಸಂಯೋಜಕಿಯೂ ಆಗಿದ್ದರು. ಕೇವಲ ಭರತನಾಟ್ಯ ಕಲಾವಿದೆ ಅಲ್ಲದೆ ಸಿನಿಮಾ ರಂಗದಲ್ಲೂ ಅವರು ಗುರುತಿಸಿಕೊಂಡಿದ್ದರು. ದೇವದಾಸಿಯರ ಜೀವನಾಧಾರಿತ ತಮಿಳು ಚಿತ್ರ ‘ಶೃಂಗಾರಂ’ನಲ್ಲಿ ಅವರು ಅಭಿನಯಿಸಿದ್ದಾರೆ.
ಹಂಸ ಮೊಯ್ಲಿ ಅವರು ಅನಾರೋಗ್ಯ ಹಿನ್ನೆಲೆ ಮನೆಯಲ್ಲಿ ವಿಶಾಂತ್ರಿ ಪಡೆಯುತ್ತಿದ್ದರು. ಆದರೆ ಬದಲಾದ ಹವಾಮಾನದಿಂದ ಏಕಾಏಕಿ ಅವರ ಆರೋಗ್ಯದ ಮೇಲೆ ಪರಿಣಾಮ ಬೀರಿದೆ ಎನ್ನಲಾಗುತ್ತಿದೆ. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾರೆ.