ಬೆಂಗಳೂರು: ರವಿವಾರ ನಗರದಲ್ಲಿರುವ ಹೆಬ್ಬಾಳದ ವಿದ್ಯುತ್ ಚಿತಾಗಾರದಲ್ಲಿ ಬಾಹ್ಯಾಕಾಶ ವಿಜ್ಞಾನಿ ಹಾಗೂ ಇಸ್ರೋ ಮಾಜಿ ಅಧ್ಯಕ್ಷ ಡಾ.ಕೆ.ಕಸ್ತೂರಿ ರಂಗನ್(84) ಪ್ರಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ಸರಕಾರಿ ಗೌರವದೊಂದಿಗೆ ನೆರವೇರಿಸಲಾಯಿತು.
ಅವರು ಶುಕ್ರವಾರದಂದು(ಎ.25) ತಮ್ಮ ನಿವಾಸದಲ್ಲಿ ನಿಧನರಾಗಿದ್ದರು. ಕಸ್ತೂರಿ ರಂಗನ್ ಅವರ ಪಾರ್ಥಿವ ಶರೀರವನ್ನು ರವಿವಾರ ಬೆಳಗ್ಗೆ 10ರಿಂದ ಮಧ್ಯಾಹ್ನದ ವರೆಗೆ ಇಲ್ಲಿನ ಸಿ.ವಿ.ರಾಮನ್ ಸಂಶೋಧನಾ ಸಂಸ್ಥೆಯಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು.
ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ರಾಜ್ಯಪಾಲ ಥಾವರ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರ ಸಚಿವ ಧಮೇರ್ಂದ್ರ ಪ್ರಧಾನ್, ಇಸ್ರೋ ಮಾಜಿ ಅಧ್ಯಕ್ಷ ಸೋಮನಾಥ್, ಕೆ. ಶಿವನ್ ಹಾಗೂ ಕಿರಣ್ ಕುಮಾರ್ ಸೇರಿದಂತೆ ಇತರೆ ಗಣ್ಯರು ಆಗಮಿಸಿದ್ದರು. ಸರಕಾರ ಆದೇಶದ ಮೇರೆಗೆ ಮೂರು ಸುತ್ತು ಕುಶಾಲತೋಪು ಸಿಡಿಸಿ ಗೌರವ ಸೂಚಿಸಲಾಯಿತು.