ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ರಾಜಕೀಯ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಿ ಅಜಾತ ಶತ್ರುವಾಗಿದ್ದ ಮಾಜಿ ಸಚಿವರಾದ ದಿ.ಎಸ್.ನಂಜಪ್ಪನವರು ಸಹಕಾರ ಕ್ಷೇತ್ರದಲ್ಲಿಯೂ ತಮ್ಮ ಛಾಪು ಮೂಡಿಸಿದ ದ್ರುವತಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಹೇಳಿದರು.
ಪಟ್ಟಣದ ಹೆಚ್.ಡಿ.ದೇವೇಗೌಡ ಸಮುದಾಯ ಭವನದಲ್ಲಿ ನಡೆದ ಮಾಜಿ ಸಚಿವ ದಿ.ಎಸ್.ನಂಜಪ್ಪನವರ ೧೦ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ತಾವು ರಾಜಕೀಯವಾಗಿ ಬೆಳೆದು ಸಾಧನೆ ಮಾಡುವುದರ ಜತೆಗೆ ನೂರಾರು ಮಂದಿ ಯುವಕರನ್ನು ಆ ಕ್ಷೇತ್ರಕ್ಕೆ ತಂದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ ಎಂದರು.
ಸದಾ ಹಸನ್ಮುಖಿಯಾಗಿ ಎಲ್ಲರೊಂದಿಗೂ ಅತ್ಯಂತ ವಿಶ್ವಾಸದಿಂದ ಬೆರೆಯುವ ಗುಣ ಹೊಂದಿದ್ದ ನಂಜಪ್ಪನವರು ಎಲ್ಲರೂ ಇಷ್ಟ ಪಡುವ ರಾಜಕಾರಣಿಯಾಗಿದ್ದಲ್ಲದೆ ತಮ್ಮ ಕೊನೆಯ ಉಸಿರು ಇರುವ ತನಕ ಜನ ಸೇವೆ ಮತ್ತು ಸಮಾಜ ಮುಖಿ ಕೆಲಸಗಳಿಗೆ ಆಧ್ಯತೆ ನೀಡಿದ್ದ ಅಪರೂಪದ ವ್ಯಕ್ತಿ ಎಂದು ಬಣ್ಣಿಸಿದರು.
ಕಳೆದ ೨೦ ವರ್ಷಗಳ ಹಿಂದೆ ಕೆ.ಆರ್.ನಗರ ಪಟ್ಟಣದಲ್ಲಿ ನವ ನಗರ ಬ್ಯಾಂಕ್ ಆರಂಭಿಸಿ ಅದನ್ನು ಉನ್ನತ್ತಿಯತ್ತ ಕೊಂಡೊಯ್ದು ಅದನ್ನು ರಾಜ್ಯದಲ್ಲಿಯೇ ಉತ್ತಮ ಸಹಕಾರ ಬ್ಯಾಂಕ್ ಮಾಡಿದ ಕೀರ್ತಿ ದಿವಂಗತರಿಗೆ ಸಲ್ಲಲಿದ್ದು ನಾವೆಲ್ಲರೂ ಅವರು ನಡೆದ ದಾರಿಯನ್ನು ಅನುಸರಿಸಿ ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು ಎಂದು ತಿಳಿಸಿದರು.
ಜಿ.ಪಂ. ಮಾಜಿ ಸದಸ್ಯ ಎಂ.ಟಿ.ಕುಮಾರ್, ಹಿರಿಯ ವಕೀಲ ಕೃಷ್ಣೇಅರಸ್ ಮಾತನಾಡಿ ಎಸ್.ನಂಜಪ್ಪನವರ ರಾಜಕೀಯ ಜೀವನದ ದಿನಗಳು ಮತ್ತು ಅವರು ಶಾಸಕರು ಹಾಗೂ ಸಚಿವರಾಗಿದ್ದಾಗ ಮಾಡಿದ ಜನಪರ ಕೆಲಸಗಳ ಬಗ್ಗೆ ಮೆಲುಕು ಹಾಕಿದರು. ಶಾಸಕ ಡಿ.ರವಿಶಂಕರ್ ಎಸ್.ನಂಜಪ್ಪನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪುಣ್ಯ ಸ್ಮರಣೆ ಅಂಗವಾಗಿ ನೇತ್ರ ತಪಾಸಣಾ ಶಿಬಿರ ಮತ್ತು ಆರೋಗ್ಯ ಶಿಬಿರ ನಡೆಸಲಾಯಿತಲ್ಲದೆ ಗೀತ ಗಾಯನ ಕಾರ್ಯಕ್ರಮದ ಮೂಲಕ ನುಡಿ ನಮನ ಸಲ್ಲಿಸಲಾಯಿತು. ಇದಕ್ಕು ಮೊದಲು ಪಟ್ಟಣದ ಅರ್ಕನಾಥ ರಸ್ತೆಯಲ್ಲಿರುವ ನವ ನಗರ ಬ್ಯಾಂಕ್ ಪ್ರಧಾನ ಕಛೇರಿ ಆವರಣದಲ್ಲಿರುವ ದಿ.ಎಸ್.ನಂಜಪ್ಪನವರ ಪುತ್ಥಳಿಗೆ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಮತ್ತು ಕುಟುಂಬದವರು ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಟಿ.ಕೆ.ಚಿನ್ನಸ್ವಾಮಿ, ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಿರ್ಲೆಶ್ರೀನಿವಾಸಗೌಡ, ಪುರಸಭೆ ಮಾಜಿ ಅಧ್ಯಕ್ಷರಾದ ಕೆ.ಜಿ.ಸುಬ್ರಮಣ್ಯ, ತಮ್ಮನಾಯಕ, ಸದಸ್ಯರಾದ ಕೆ.ಎಲ್.ಜಗದೀಶ್, ನಟರಾಜು, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಬಿ.ಇ.ಯೋಗಾನಂದ, ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ಸಿ.ಸುರೇಶ್, ವ್ಯವಸ್ಥಾಪಕ ಎಂ.ಪಿ.ಸುಹಾಸ್, ಲಲಿತಮ್ಮನಂಜಪ್ಪ, ಕೆ.ಎನ್.ಬಸಂತ್‌ನAಜಪ್ಪ, ಕೆ.ಎನ್.ದಿನೇಶ್‌ನಂಜಪ್ಪ, ಅನುಶ್ರುತ್‌ದಿನೇಶ್, ಬಿಜೆಪಿ ಮುಖಂಡ ಪಿ.ಪ್ರಶಾಂತ್‌ಗೌಡ, ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, ಮುಖಂಡರಾದ ವೈ.ಎಸ್.ಕುಮಾರ್, ಹೆಚ್.ಪಿ.ಗೋಪಾಲ್, ನರಸಿಂಹಪ್ರಸಾದ್, ಪೆರಿಸ್ವಾಮಿ, ಮಿರ್ಲೆಸುಜಯ್‌ಗೌಡ, ಕೆ.ಎಸ್.ರೇವಣ್ಣ, ಕೆ.ಎಸ್.ಮಹೇಶ್, ಸುನೀತಾರಮೇಶ್, ಶರತ್‌ಅರಸ್, ಎಂ.ಕೆ.ಮಹದೇವ್, ಹೆಚ್.ಎಸ್.ವೇಣುಗೋಪಾಲ್, ಕೇಶವ, ಮತ್ತಿತರರು ಇದ್ದರು.