ಮೈಸೂರು : ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಘೋಷ ವಾಕ್ಯಗಳೊಂದಿಗೆ ಕಾಂಗ್ರೆಸ್ ಸಂವಿಧಾನ ಉಳಿಸುವ ಕೆಲಸ ಮಾಡಿದರೆ, ಬಿಜೆಪಿ ಮತ್ತು ಆರ್.ಎಸ್.ಎಸ್ ಸಂವಿಧಾನ ದುರ್ಬಲಗೊಳಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಅದಕ್ಕಾಗಿಯೇ ಮೋಹನ್ ಭಾಗವತ್ ಮತ್ತು ಅಮಿತ್ ಶಾ ಸಂವಿಧಾನ ವಿರೋಧಿ ಹೇಳಿಕೆಗಳನ್ನು ನೀಡಿರುವುದು ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ವಾಗ್ದಾಳಿ ನಡೆಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆರ್.ಎಸ್.ಎಸ್ ಸರಸಂಘ ಸಂಚಾಲಕ ಮೋಹನ್ ಭಾಗವತ್ ಸ್ವಾತಂತ್ರ್ಯ ಬಂದದ್ದು ಆಗಸ್ಟ್ ೧೫, ೧೯೪೭ ರಲ್ಲಿ ಅಲ್ಲ, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಕಟ್ಟಿದಾಗ ನಿಜವಾದ ಸ್ವಾತಂತ್ರ್ಯ ಬಂದಿರುವುದು ಎಂಬ ಹೇಳಿಕೆ ನೀಡುವ ಮೂಲಕಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನ ಮತ್ತು ಮಹಾತ್ಮಾ ಗಾಂಧೀಜಿ ಸೇರಿದಂತೆ ಸ್ವಾತಂತ್ರ್ಯ ಹೋರಾಟದ ನಾಯಕರುಗಳಿಗೆ ಅಪಮಾನ ಮಾಡಿದ್ದಾರೆ. ಜೊತೆಗೆ ಇದು ಆರ್ಟಿಕಲ್ ೫೧ಎ ಪ್ರಕಾರ ಸಂವಿಧಾನ ವಿರೋಧಿ ಮತ್ತು ದೇಶದ್ರೋಹದ ಹೇಳಿಕೆಯಾಗಿದೆ. ಆದರೂ ಬಿಜೆಪಿಯ ನರೇಂದ್ರ ಮೋದಿಯಾಗಲಿ, ಅಮಿತ್ ಶಾ ಆಗಲಿ ತುಟಿ ಬಿಚ್ಚುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬ್ರಿಟಿಷರನ್ನು ಭಾರತದಿಂದ ತೊಲಗಿಸಿ ಲಕ್ಷಾಂತರ ಜನ ಜೀವ ತೆತ್ತಿದ್ದಾರೆ. ಜಲಿಯನ್ ವಾಲಾಭಾಗ್ ಹತ್ಯಾಕಾಂಡದಲ್ಲಿ ನೂರಾರು ಜನ ಜೀವ ಕಳೆದುಕೊಂಡರು.ಭಗತ್ ಸಿಂಗ್, ಸುಭಾಷ್ ಚಂದ್ರಬೋಸ್, ಮದನರಾಯ್ ಸತ್ಯಾಗ್ರಹದ ಮೂಲಕ ಸ್ವಾತಂತ್ರ÷್ಯಕ್ಕಾಗಿ ಹೋರಾಟ ಮಾಡಿದವರು. ನಿಮ್ಮ ಮಾತಿನಿಂದ ಅವರಿಗೆಲ್ಲಾ ಅಗೌರವ ತೋರುತ್ತಿಲ್ವ ಭಾಗವತ್ ಅವರೆ ಎಂದು ಪ್ರಶ್ನಿಸಿದರು.
೧೯೨೫ರಲ್ಲಿ ಆರ್.ಎಸ್.ಎಸ್ ಪ್ರಾರಂಭ ಆಯಿತಲ್ಲ ಸ್ವಾತಂತ್ರ್ಯ ಹೋರಾಟಕ್ಕೆ ನಿಮ್ಮ ಕೊಡುಗೆ ಏನು? ನಿಮಗೆ ಸ್ವಾತಂತ್ರ÷್ಯ ಚಳವಳಿಯ ಅರಿವೇ ಇಲ್ಲ, ಹೋರಾಟ ತ್ಯಾಗ ಬಲಿದಾನವ ಅರ್ಥವೇ ಗೊತ್ತಿಲ್ಲದೆ ಬುದ್ಧಿ ಭ್ರಮಣೆಯಾಗಿ ಇಂತಹ ಹೇಳಿಕೆಗಳನ್ನು ನೀಡುತ್ತೀದ್ದೀರಾ? ಬ್ರಿಟಿಷರ ಜೊತೆ ಶಾಮೀಲಾಗಿದ್ದೀರಿ ಎಂಬುದಕ್ಕೆ ಇನ್ನೊಂದು ಉದಾಹರಣೆ ಬೇಕಾ ಎಂದು ಹರಿಹಾಯ್ದರು.
ರಾಹುಲ್ ಗಾಂಧಿ ಹೇಳಿಕೆ ಅಪಾರ್ಥಗೊಳಿಸಿ ದೇಶವ್ಯಾಪಿ ಪ್ರಕರಣ ದಾಖಲಿಸುತ್ತೀರಿ. ಬುದ್ಧಿಜೀವಿಗಳನ್ನು ನಗರ ನಕ್ಸಲರು ಎಂದು ಹೇಳಿ ದೇಶ ದ್ರೋಹದ ಪ್ರಕರಣ ದಾಖಲಿಸುತ್ತೀರಿ. ನಿಮ್ಮದೆ ಮಾತೃ ಸಂಸ್ಥೆ ಮುಖ್ಯಸ್ಥ ದೇಶದ್ರೋಹ ಮತ್ತು ಸಂವಿಧಾನ ವಿರೋಧಿ ಹೇಳಿಕೆ ನೀಡಿದಾಗ ಅವರ ಮೇಲೆ ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನೀವು ಏಕೆ ಕ್ರಮ ಜರುಗಿಸುತ್ತಿಲ್ಲಾ ನರೇಂದ್ರ ಮೋದಿ, ಅಮಿತ್ ಶಾ ಅವರೆ ಎಂದು ಪ್ರಶ್ನಿಸಿದರು.
ನಿಮಗೆ ನಿಜವಾಗಲೂ ಸಂವಿಧಾನದ ಮೇಲೆ ಗೌರವವಿದ್ದರೆ ಮೋಹನ್ ಭಾಗವತ್ ಮೇಲೆ ಸುಮುಟೊ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು. ಕಾಂಗ್ರೆಸ್ ಈಗಾಗಲೇ ಮೋಹನ್ ಭಾಗವತ್ ವಿರುದ್ಧ ಪ್ರಕರಣ ದಾಖಲಿಸಲು ಸಿದ್ಧತೆ ನಡೆಸಿದೆ. ಪ್ರಕರಣ ದಾಖಲಿಸುವುದು ಒಂದು ಭಾಗವಾದರೆ ಇವರ ಸಂವಿಧಾನ ವಿರೋಧಿ ಮತ್ತು ದೇಶದ್ರೋಹದ ಹೇಳಿಕೆಗಳು ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂವಿಧಾನ ನಾಶಗೊಳಿಸುವ ಹೇಳಿಕೆ ನೀಡಿರುವುದನ್ನು ಜನತಾ ನ್ಯಾಯಾಲಯದ ಮುಂದೆ ಕೊಂಡೊಯ್ಯುತ್ತೇವೆ. ಅಲ್ಲಿಯೇ ನ್ಯಾಯ ಕೇಳುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬಿಜೆಪಿ ಮತ್ತು ಆರ್.ಎಸ್.ಎಸ್ ಶ್ರೀರಾಮನನ್ನು ದೇವರು ಎಂದು ಹೇಳಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಶ್ರೀರಾಮಚಂದ್ರ ದೇವರಲ್ಲ. ರಾಜಕುಮಾರನಾಗಿ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡಿದ್ದ ವ್ಯಕ್ತಿ. ಹಾಗಾಗಿ ಅವನ ಮೇಲೆ ಗೌರವವಿದೆ.
• ವಿ.ಎಸ್.ಉಗ್ರಪ್ಪ, ಮಾಜಿ ಸಂಸದ.