ಹೊಸದಿಲ್ಲಿ: ಮುಂಬೈ ಕ್ರಿಕೆಟ್‌ನ ‘ವಿಶ್ವಕೋಶ’ ಎಂದೇ ಖ್ಯಾತಿ ಪಡೆದಿದ್ದ ಮುಂಬೈ ತಂಡದ ಮಾಜಿ ನಾಯಕ ಮಿಲಿಂದ್ ರೇಗೆ ಬುಧವಾರ ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 76 ವರ್ಷ ವಯಸ್ಸಾಗಿತ್ತು.
ಆಫ್ ಸ್ಪಿನ್ನಿಂಗ್ ಆಲ್‌ರೌಂಡರ್ ರೇಗೆ ಮುಂಬೈ ಕ್ರಿಕೆಟ್‌ನ ಸುವರ್ಣ ಯುಗದಲ್ಲಿ 52 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದರು. ಸತತ ಐದು ರಣಜಿ ಟ್ರೋಫಿ ವಿಜೇತ ತಂಡದ ಸದಸ್ಯರಾಗಿದ್ದರು. 20ರ ದಶಕದ ಅಂತ್ಯದಲ್ಲಿ ಹೃದಯ ಸಂಬಂಧಿ ಸಮಸ್ಯೆಗಳಿಂದಾಗಿ ಅವರ ಕ್ರಿಕೆಟ್ ವೃತ್ತಿಜೀವನ ಮೊಟಕುಗೊಂಡಿತು. ಆದರೆ ಅವರು ಸ್ಪರ್ಧಾತ್ಮಕ ಕ್ರಿಕೆಟಿಗೆ ಮರಳಿದ್ದಲ್ಲದೆ, ಮೈದಾನದ ಹೊರಗೆ ಅದ್ಭುತ ವೃತ್ತಿಜೀವನ ಅನುಭವಿಸಿದರು.
ಆಯ್ಕೆಗಾರನಾಗಿ ಸಚಿನ್ ತೆಂಡುಲ್ಕರ್‌ರಿಂದ ಯಶಸ್ವಿ ಜೈಸ್ವಾಲ್ ತನಕ ಹಲವು ಪ್ರತಿಭೆಯನ್ನು ಹುಡುಕಿ ಉನ್ನತಮಟ್ಟಕ್ಕೇರಲು ನೆರವಾದ ಮಾಜಿ ಕ್ರಿಕೆಟಿಗರ ಪೈಕಿ ರೇಗೆ ಮೊದಲಿಗರು. ಕಳೆದ 4 ವರ್ಷಗಳಿಂದ ಮುಂಬೈ ಕ್ರಿಕೆಟ್ ಸಂಸ್ಥೆಯ ಸಲಹೆಗಾರನಾಗಿ ಕಾರ್ಯನಿರ್ವಹಿಸುತ್ತಿದ್ದರು.
ರೇಗೆ ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ಗುರುವಾರ ಮುಂಬೈನಲ್ಲಿ ನೆರವೇರಲಿದೆ.