ಮಂಗಳೂರು (ದಕ್ಷಿಣ ಕನ್ನಡ): ವಿಶ್ವ ಹಿಂದೂ ಪರಿಷತ್ ನ ನೂತನ ಜಿಲ್ಲಾ ಕಾರ್ಯಾಲಯ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಆಗಮಿಸಿದ ವೇಳೆ ಸಂಘ ಪರಿವಾರದ ಕಾರ್ಯಕರ್ತರು ಆಕ್ಷೇಪಿಸಿ ತಡೆದ ಘಟನೆ ಇಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ.
ಪುತ್ತೂರಿನ ಎಸ್ ಡಿಸಿಸಿ ಬ್ಯಾಂಕ್ ಮುಂಭಾಗದ ಈಹಿಂದಿನ ವಿಶ್ವ ಹಿಂದೂ ಪರಿಷತ್ ಕಾರ್ಯಾಲಯವಿದ್ದ ಸ್ಥಳದಲ್ಲಿ ಇಂದು ಶಿಲಾನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮ ಆರಂಭಗೊಳ್ಳುತ್ತಿದ್ದಂತೆ ಕಳೆದ ವಿಧಾನಸಭೆಯ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಬಂಡಾಯವಾಗಿ ಪುತ್ತಿಲ ಪರಿವಾರದ ಹೆಸರಿನಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿದ್ದ ಅರುಣ್ ಕುಮಾರ್ ಪುತ್ತಿಲ ಸಹಿತ ಅವರ ಬೆಂಗಲಿಗರು ಕಾರಿನಲ್ಲಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್, ಜರಂಗದಳ ಮತ್ತು ಹಿಂದೂ ಜಾಗರಣೆ ವೇದಿಕೆಯ ಕೆಲ ಕಾರ್ಯಕರ್ತರು ಅಲ್ಲಿಗೆ ಆಗಮಿಸಿ ಕಾರಿನಿಂದ ಇಳಿಯುತ್ತಿದ್ದ ಪುತ್ತಿಲರನ್ನು ತಡೆದರು.

ಈ ವೇಳೆ ಪುತ್ತಿಲರ ಜತೆಗಿದ್ದವರು ಪುತ್ತಿಲರ ನೆರವಿಗೆ ಧಾವಿಸಿ, ತಡೆಯಲು ಯತ್ನಿಸುತ್ತಿದ್ದವರ ಜತೆ ವಾಗ್ವಾದ ನಡೆಸಿದ್ದಾರೆ. ಇದು ಹೊಯ್ ಕೈ ಹಂತಕ್ಕೂ ತಲುಪಿ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಯಿತು.
ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಸಂಘ ಪರಿವಾರದ ಹಿರಿಯ ಮುಖಂಡರು ಮದ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಬಳಿಕ ಅರುಣ್ ಕುಮಾರ್ ಪುತ್ತಿಲರನ್ನು ವೇದಿಕೆಯತ್ತ ಕರೆದೊಯ್ದರು. ಪುತ್ತಿಲ ಕೆಲ ಹೊತ್ತು ಸಭೆಯಲ್ಲಿ ಉಪಸ್ಥಿತರಿದ್ದು ಬಳಿಕ ಅಲ್ಲಿಂದ ನಿರ್ಗಮಿಸಿದ್ರು.