Monday, April 21, 2025
Google search engine

Homeರಾಜ್ಯನಾಳೆ ಮಡಿಕೇರಿಯಲ್ಲಿ 12.26 ಕೋಟಿ ವೆಚ್ಚದಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಹಾಗೂ ತಾರಾಲಯಕ್ಕೆ ಶಂಕುಸ್ಥಾಪನೆ:...

ನಾಳೆ ಮಡಿಕೇರಿಯಲ್ಲಿ 12.26 ಕೋಟಿ ವೆಚ್ಚದಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಹಾಗೂ ತಾರಾಲಯಕ್ಕೆ ಶಂಕುಸ್ಥಾಪನೆ: ಸಚಿವ ಎನ್‌ ಎಸ್‌ ಭೋಸರಾಜು

ಬೆಂಗಳೂರು: ಸ್ಕಾಟ್‌ಲ್ಯಾಂಡ್‌ ಆಫ್‌ ಇಂಡಿಯಾ ಎಂದೇ ಕರೆಯಲ್ಪಡುವ ಮಡಿಕೇರಿಯಲ್ಲಿ ರಾತ್ರಿ ವೇಳೆ ಬೆಳಕಿನ ಅಡಚಣೆ ಬಹಳ ಕಡಿಮೆ. ಇದು ನಕ್ಷತ್ರಗಳು ಹಾಗೂ ಗ್ರಹಗಳ ವೀಕ್ಷಣೆಗೆ ಇರುವಂತಹ ಭಾರತ ದೇಶದ ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದ್ದು ಇಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವತಿಯಿಂದ ಸುಮಾರು 12.26 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಅತ್ಯಾಧುನಿಕ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಹಾಗೂ ತಾರಾಲಯವನ್ನು ಸ್ಥಾಪಿಸಲಾಗುವುದು. ಇದರ ಶಂಕುಸ್ಥಾಪನೆಯನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ನಾಳೆ ನೆರವೇರಿಸಲಿದ್ದಾರೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌ ಎಸ್‌ ಭೋಸರಾಜು ಅವರು ತಿಳಿಸಿದ್ದಾರೆ.

ಇಂದು ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು, ರಾಜ್ಯದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಪ್ರಚುರ ಪಡಿಸುವ ಉದ್ದೇಶದಿಂದ ಹಾಗೂ ವಿಜ್ಞಾನದ ಶಿಕ್ಷಣ, ವೈಚಾರಿಕ ಚಿಂತನೆ ಮೂಡಿಸುವುದಕ್ಕೆ ಹಾಗೂ ಖಗೋಳ ವಿಜ್ಞಾನ ವಿಷಯಗಳನ್ನು ವಿದ್ಯಾರ್ಥಿಗಳು ಮತ್ತು ಜನಸಾಮಾನ್ಯರಿಗೆ ಅರಿವು ಮೂಡಿಸುವ ದೃಷ್ಟಿಯಿಂದ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ವಿಜ್ಞಾನ ಕೇಂದ್ರ ಮತ್ತು ತಾರಾಲಯಗಳನ್ನ ನಮ್ಮ ಇಲಾಖೆಯ ವತಿಯಿಂದ ಸ್ಥಾಪಿಸಲಾಗುತ್ತಿದೆ.

ಸ್ವಚ್ಚ ಆಕಾಶ (Clear Sky), ಹೆಚ್ಚಿನ ವಾಯಮಾಲಿನ್ಯ ಹಾಗೂ ಬೆಳಕಿನ ಅಡಚಣೆ ಇಲ್ಲದೇ ಇರುವಂತಹ ರಾತ್ರಿ ನಕ್ಷತ್ರ ವೀಕ್ಷಣೆಗೆ ಉತ್ತಮ ವಾತಾವರಣ ಕಲ್ಪಿಸುವಂತಹ ಪರಿಸರವನ್ನ ಕೊಡಗು ಜಿಲ್ಲೆ ಹೊಂದಿದೆ. ಹಿಮಾಚಲ ಪ್ರದೇಶದ ಸ್ಪಿಟಿ ಕಣಿವೆ, ಲಡಾಖ್‌ನ ಪಂಗೋಂಗ್‌ ತ್ಸೋ ಸರೋವರ, ಗುಜರಾತ್‌ನ ರನ್‌ ಅಫ್‌ ಕಚ್‌, ಅಂಡಮಾನ್‌ ಮತ್ತು ನಿಕೋಬಾರ್‌ ನ ನೀಲ್‌ ದ್ವೀಪ ಹಾಗೂ ಮಹರಾಷ್ಟ್ರ ಜಿಲ್ಲೆ ಮಾಥೇರಾನ್ ನಂತೆಯೇ ಕೊಡಗು ಜಿಲ್ಲೆಯ ಅತ್ಯಂತ ಪ್ರಶಸ್ತವಾದ ಜಾಗ ಎನ್ನುವ ಹೆಗ್ಗಳಿಕೆಯನ್ನು ಹೊಂದಿದೆ. ಜಿಲ್ಲೆಯಲ್ಲಿ ಬಾಹ್ಯಾಕಾಶ ಪ್ರವಾಸಕ್ಕೆ ಇಂಬು ನೀಡುವ ಹಾಗೂ ಜಿಲ್ಲೆಯ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ನಾಳೆ (ಜನವರಿ 25) ರಂದು ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಶಂಕುಸ್ಥಾಪನೆ ನೆರೆವೇರಿಸಲಿದ್ದಾರೆ ಎಂದು ಮಾನ್ಯ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌ ಎಸ್‌ ಭೋಸರಾಜು ಅವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular