ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಅವರು ರಚಿಸಿದ ವನ್ಯಜೀವಿ ಕುರಿತ ನಾಲ್ಕು ಪುಸ್ತಕಗಳು ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದ ಆಶ್ರಯದಲ್ಲಿ ಮೇ 9 ರಂದು ಬಿಡುಗಡೆಯಾಗಲಿದೆ.
ಮೈಸೂರು ಕಲ್ಚರಲ್ ಅಸೋಸಿಯೇಶನ್, ಬೆಂಗಳೂರಿನ ಅಕ್ಷರ ಮಂಟಪ ಪಬ್ಲಿಕೇಷನ್ ಸಹಯೋಗದಲ್ಲಿ ಅಂದು ಬೆಳಗ್ಗೆ 10.30ಕ್ಕೆ ವಿಜ್ಞಾನ ಭವನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಐತಿಚಂಡ ರಮೇಶ್ ಉತ್ತಪ್ಪ ಅವರ `ಕಾಡು ಹೇಳಿದ ಕಥೆ’, `ಹಾವು, ನಂಬಿಕೆ ಹಾಗೂ ಮನೋವೈಜ್ಞಾನಿಕ ವಿಶ್ಲೇಷಣೆ’, `ಆನೆ, ಬದಲಾದ ವರ್ತನೆ’, `ಅರ್ಜುನ, ನಿನ್ನ ಮರೆಯಲೆಂತು ನಾ’ ಕೃತಿಗಳು ಲೋಕಾರ್ಪಣೆಯಾಗಲಿವೆ.
ಕಾರ್ಯಕ್ರಮವನ್ನು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎನ್.ಕೆ.ಲೋಕನಾಥ್ ಉದ್ಘಾಟಿಸಲಿದ್ದಾರೆ. ವಿಶ್ವವಾಣಿ ಪತ್ರಿಕೆಯ ಪ್ರಧಾನ ಸಂಪಾದಕ ಶ್ರೀ ವಿಶ್ವೇಶ್ವರ ಭಟ್, ಪ್ರಜಾವಾಣಿ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಶ್ರೀ ರವಿಂದ್ರ ಭಟ್, ವಿಜಯ ಕರ್ನಾಟಕ ಪತ್ರಿಕೆ ಸಂಪಾದಕ ಶ್ರೀ ಸುದರ್ಶನ ಚನ್ನಂಗಿಹಳ್ಳಿ, ವಿಜಯವಾಣಿ ಪತ್ರಿಕ ಸಂಪಾದಕ ಶ್ರೀ ಕೆ.ಎನ್. ಚನ್ನೇಗೌಡ, ಕನ್ನಡ ಪ್ರಭಾ ಪತ್ರಿಕೆ ಪ್ರಧಾನ ಸಂಪಾದಕ ಶ್ರೀ ರವಿ ಹೆಗಡೆ ಅವರುಗಳು ಕೃತಿ ಬಿಡುಗಡೆ ಮಾಡಲಿದ್ದಾರೆ. ಮೈಸೂರು ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರೊ. ಸಪ್ನ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಶ್ರೀ ಮಾನಸ ಅವರು ವಿಶೇಷ ಅತಿಥಿಯಾಗಿ ಆಗಮಿಸುತ್ತಾರೆ. ಮೈಸೂರು ಕಲ್ಚರಲ್ ಅಸೋಸಿಯೇಷನ್‌ನ ಶ್ರೀ ಎ.ಪಿ.ನಾಗೇಶ್, ಪ್ರಕಾಶಕ ಶ್ರೀ ಚೇತನ್ ಕಣಬೂರು ಅವರು ಉಪಸ್ಥಿತರಿರುತ್ತಾರೆ. ಕಾರ್ಯಕ್ರಮದಲ್ಲಿ ಮೈಸೂರಿನ ಹಿರಿಯ ವೈಲ್ಡ್ ಲೈಫ್ ಛಾಯಾಗ್ರಾಹಕರನ್ನು ಸನ್ಮಾನಿಸಲಾಗುವುದು.