ಹಾವೇರಿ: ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ನಾಲ್ವರು ಮೃತಪಟ್ಟ ಘಟನೆ ಜಿಲ್ಲೆಯ ಶಿಗ್ಗಾಂವಿ ತಾಲೂಕು ತಡಸ-ನೀರಲಗಿ ಗ್ರಾಮದ ಬಳಿ ನಡೆದಿದೆ.
ಬೆಂಗಳೂರಿನ ಚಾಮರಾಜಪೇಟೆಯ ಚಂದ್ರಮ್ಮ (೫೯ ವರ್ಷ), ಇವರ ಪುತ್ರಿಯೂ ಆದ ದಾವಣಗೆರೆ ಜಿಲ್ಲೆ ಹರಿಹರ ಮೂಲದ ಮೀನಾ (೩೮ ವರ್ಷ), ಮಹೇಶ್ ಕುಮಾರ್ ಸಿ (೪೧ ವರ್ಷ) ಮತ್ತು ಧನವೀರ್ (೧೨ ವರ್ಷ) ಮೃತ ದುರ್ದೈವಿಗಳು. ಇವರೆಲ್ಲರೂ ಹುಬ್ಬಳ್ಳಿಯಿಂದ ಬೆಂಗಳೂರು ಕಡೆ ಆಲ್ಟ್ರೋಜ್ ಕಾರಿನಲ್ಲಿ ಹೊರಟಿದ್ದ ವೇಳೆ ಈ ಭೀಕರ ಅಪಘಾತ ಸಂಭವಿಸಿ ನಾಲ್ವರು ಉಸಿರು ಚೆಲ್ಲಿದ್ದಾರೆ.
ಅಪಘಾತಕ್ಕೆ ಎಕ್ಸ್‌ಯುವಿ ಕಾರು ಚಾಲಕನ ಅತಿವೇಗ ಕಾರಣ; ರಾಷ್ಟ್ರೀಯ ಹೆದ್ದಾರಿ ೪೮ರಲ್ಲಿ ಶಿಗ್ಗಾವಿಯಿಂದ ಹುಬ್ಬಳ್ಳಿ ಮಾರ್ಗವಾಗಿ ಹೊರಟಿದ್ದ ಎಕ್ಸ್‌ಯುವಿ ಕಾರಿನ ಚಾಲಕ ಅತಿಯಾದ ವೇಗದಲ್ಲಿ ವಾಹನ ಚಲಾಯಿಸಿದ್ದಾನೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು ಮೊದಲು ರಸ್ತೆ ಡಿವೈಡರ್‌ಗೆ ಗುದ್ದಿದೆ. ಬಳಿಕ ಎದುರಿಗೆ ಬರುತ್ತಿದ್ದ ಕೆಂಪುಬಣ್ಣದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಆಲ್ಟ್ರೋಜ್ ಕಾರಿನಲ್ಲಿದ್ದ ೧೨ ವರ್ಷದ ಬಾಲಕ ಸೇರಿದಂತೆ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಹಾವೇರಿ ಎಸ್.ಪಿ ಅಂಶುಕುಮಾರ್ ಭೇಟಿ ನೀಡಿ ಪರಶೀಲನೆ ನಡೆಸಿದರು. ಮೃತರನ್ನು ಮರಣೋತ್ತರ ಪರೀಕ್ಷೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ತಡಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ.