ಪ್ಯಾರಿಸ್, ಜುಲೈ 14: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಿನ್ನೆ ಮತ್ತು ಇಂದು (ಜುಲೈ 13 ಮತ್ತು ಜುಲೈ 14) ಎರಡು ದಿನಗಳ ಕಾಲ ಫ್ರಾನ್ಸ್ ಪ್ರವಾಸ ಕೈಗೊಂಡಿದ್ದು, ಇಂದು ನಡೆಯಲಿರುವ ವಾರ್ಷಿಕ ಬಾಸ್ಟಿಲ್ ಡೇ ಪರೇಡ್‌ನಲ್ಲಿ ಪ್ರಧಾನಿ ಮೋದಿ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಈ ವಿಶೇಷ ಗೌರವದೊಂದಿಗೆ ಮತ್ತೊಂದು ಐತಿಹಾಸಿಕ ಗೌರವ ಪ್ರಧಾನಿ ನರೇಂದ್ರ ಮೋದಿ ಅವರ ಮುಡಿಗೇರಿದೆ. ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಫ್ರಾನ್ಸ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಗ್ರ್ಯಾಂಡ್ ಕ್ರಾಸ್ ಆಫ್ ದಿ ಲೀಜನ್ ಆಫ್ ಹನರ್ ನೀಡಿ ಗೌರವಿಸಿದ್ದಾರೆ. ಈ ಅತ್ಯುನ್ನತವಾದ ಗೌರವವನ್ನು ಈ ಹಿಂದೆ ವಿಶ್ವದಾದ್ಯಂತ ಆಯ್ದ ವ್ಯಕ್ತಿಗಳಿಗೆ ಮಾತ್ರ ನೀಡಲಾಗಿತ್ತು.
ಗ್ರ್ಯಾಂಡ್ ಕ್ರಾಸ್ ಆಫ್ ದಿ ಲೀಜನ್ ಆಫ್ ಹನರ್ ಅನ್ನು ಈ ಹಿಂದೆ ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ, ಆಗಿನ ವೇಲ್ಸ್ ರಾಜಕುಮಾರ ಕಿಂಗ್ ಚಾರ್ಲ್ಸ್, ಜರ್ಮನಿಯ ಮಾಜಿ ಚಾನ್ಸೆಲರ್ ಏಂಜೆಲಾ ಮರ್ಕೆಲ್, ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ, ಜರ್ಮನಿಯ ಮಾಜಿ ಚಾನ್ಸೆಲರ್ ಸೇರಿದಂತೆ ವಿಶ್ವದ ಇತರ ಶ್ರೇಷ್ಠ ನಾಯಕರಿಗೆ ನೀಡಿ ಗೌರವಿಸಲಾಗಿತ್ತು.
ಫ್ರಾನ್ಸ್‌ಗೆ ಆಗಮಿಸಿದ ನರೇಂದ್ರ ಮೋದಿ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿಕೊಂಡಿರುವ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ದೇಶದ ಅತ್ಯುನ್ನತ ಗೌರವವನ್ನು ನೀಡಿದ್ದಾರೆ. ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಗ್ರ್ಯಾಂಡ್ ಕ್ರಾಸ್ ಆಫ್ ದಿ ಲೀಜನ್ ಆಫ್ ಹನರ್ ನೀಡುವ ಫೋಟೋಗಳನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ.
ಇನ್ನು ಇಂದು ನಡೆಯಲಿರುವ ವಾರ್ಷಿಕ ಬಾಸ್ಟಿಲ್ ಡೇ ಪರೇಡ್‌ನಲ್ಲಿ ಭಾಗಿಯಾಗಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಎಮ್ಯಾನುಯೆಲ್ ಮ್ಯಾಕ್ರನ್ ಅವರ ಜೊತೆ ವ್ಯಾಪಾರ, ಹೂಡಿಕೆ ರಕ್ಷಣೆ, ಬಾಹ್ಯಾಕಾಶ, ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರ ಮತ್ತು ಒಪ್ಪಂದಗಳ ಕುರಿತು ಮಾತುಕತೆ ನಡೆಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಗ್ರ್ಯಾಂಡ್ ಕ್ರಾಸ್ ಆಫ್ ದಿ ಲೀಜನ್ ಆಫ್ ಹನರ್ ಪಡೆದ ಮೊದಲ ಭಾರತೀಯ ಪ್ರಧಾನ ಮಂತ್ರಿಯಾಗಿದ್ದು, ಈ ಹಿಂದೆ ಕೂಡ ಭೂತಾನ್, ಈಜಿಪ್ಟ್, ಯುಎಸ್ ಸೇರಿದಂತೆ ಹಲವು ರಾಷ್ಟ್ರಗಳ ಅತ್ಯುನ್ನತ ನಾಗರಿಕ ಪ್ರಶಸ್ತಿಗಳ ಗೌರವವನ್ನು ಪಡೆದಿದ್ದರು.