Friday, April 11, 2025
Google search engine

Homeಅಪರಾಧವಂಚನೆ ಪ್ರಕರಣ: ಬಿಟಿವಿ ವ್ಯವಸ್ಥಾಪಕ ನಿರ್ದೇಶಕ ಜಿ.ಎಂ.ಕುಮಾರ್ ಬಂಧನ

ವಂಚನೆ ಪ್ರಕರಣ: ಬಿಟಿವಿ ವ್ಯವಸ್ಥಾಪಕ ನಿರ್ದೇಶಕ ಜಿ.ಎಂ.ಕುಮಾರ್ ಬಂಧನ

ಬೆಂಗಳೂರು: ವಂಚನೆ ಪ್ರಕರಣದ ಆರೋಪಿಯಾಗಿರುವ ‘ಬಿಟಿವಿ’ ಸುದ್ದಿವಾಹಿನಿಯ ವ್ಯವಸ್ಥಾಪಕ ನಿರ್ದೇಶಕ ಜಿ.ಎಂ. ಕುಮಾರ್ ಅವರನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಜಾಮೀನು ರಹಿತ ವಾರಂಟ್ (ಎನ್‌ಬಿಡಬ್ಲ್ಯು) ಜಾರಿಯಾಗಿದ್ದರಿಂದ ಕುಮಾರ್‌ನನ್ನು ಬಂಧಿಸಿ ನ್ಯಾಯಾ ಲಯಕ್ಕೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಲಯ, ಅವರನ್ನು ಮುಂದಿನ 14 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್. ಗಿರೀಶ್ ತಿಳಿಸಿದ್ದಾರೆ.

‘ಕುಮಾರ್ ವಿರುದ್ಧ ಅಶ್ವಿನ್ ಮಹೇಂದ್ರ ಅವರು ದೂರು ನೀಡಿದ್ದರು. ಐಪಿಸಿ 402 (ನಂಬಿಕೆ ದ್ರೋಹ) ಹಾಗೂ ಐಪಿಸಿ 420 (ವಂಚನೆ) ಆರೋಪದಡಿ ಕುಮಾರ್ ವಿರುದ್ಧ 2022ರಲ್ಲಿ ವಿಜಯನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು’ ಎಂದು ಪೊಲೀಸರು ಹೇಳಿದರು.

ದೂರುದಾರ ಅಶ್ವಿನ್‌ ಮಹೇಂದ್ರ ಹಾಗೂ ಕುಮಾರ್ ಇಬ್ಬರೂ ಪಾಲುದಾರಿಕೆಯಲ್ಲಿ ಈಗಲ್‌ಸೈಟ್ ಮಿಡಿಯಾ ಕಂಪನಿ ಆರಂಭಿಸಿದ್ದರು. ಇಬ್ಬರೂ ಕಂಪನಿಯ ನಿರ್ದೇಶಕರಾಗಿದ್ದರು. ಆರೋಪಿ ಕುಮಾರ್, ಒಬ್ಬರೇ ಕಾನೂನು ಬಾಹಿರವಾಗಿ ಆಡಳಿತ ಮಂಡಳಿ ಸಭೆ ನಡೆಸಲಾರಂಭಿಸಿದ್ದರು. ಅಶ್ವಿನ್ ಅವರ ದಾಖಲಾತಿಗಳನ್ನು ದುರ್ಬಳಕೆ ಮಾಡಿಕೊಂಡು ಬ್ಯಾಂಕ್‌ಗಳಲ್ಲಿ ಖಾತೆ ತೆರೆದು ಕೋಟಿಗೂ ಹೆಚ್ಚು ವಹಿವಾಟು ನಡೆಸಿದ್ದರೆಂಬ ಆರೋಪವಿತ್ತು.

ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದ ಕುಮಾರ್, ಒಂದು ವರ್ಷದಿಂದ  ತಲೆಮರೆಸಿಕೊಂಡಿದ್ದರು. ನೋಟಿಸ್ ಜಾರಿಯಾದರೂ ವಿಚಾರಣೆಗೆ ಹೋಗಿರಲಿಲ್ಲ. ಈತನ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ನ್ಯಾಯಾಲಯ, ಇತ್ತೀಚೆಗೆ ಎನ್‌ಬಿಡಬ್ಲ್ಯು ಜಾರಿ ಮಾಡಿತ್ತು. ಆರೋಪಿ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿತ್ತು. ಶನಿವಾರ ಮನೆಯ ಬಳಿ ವಾಯುವಿಹಾರ ಮಾಡುತ್ತಿದ್ದ ಸಂದರ್ಭದಲ್ಲಿ ಕುಮಾರ್ ಅವರನ್ನು ವಶಕ್ಕೆ ಪಡೆಯಲಾಯಿತು.

RELATED ARTICLES
- Advertisment -
Google search engine

Most Popular