ಹಾವೇರಿ: ಮಹಿಳೆಯರ ಹೆಸರಲ್ಲಿ ಕೋಟಿ ಕೋಟಿ ಹಣ ವಂಚನೆ ಮಾಡಿದ ಆರೋಪದಡಿ ಹಾವೇರಿ ಜಿಲ್ಲೆಯ ಹಿರೇಕೆರೂರು ಪಟ್ಟಣದ ವಿದ್ಯಾನಗರದಲ್ಲಿರುವ ಫೈನಾನ್ಸ್ ಸಂಸ್ಥೆಯ ಓರ್ವ ಸಿಬ್ಬಂದಿಯನ್ನು ಹಿರೇಕೆರೂರು ಟೌನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಬರೋಬ್ಬರಿ 3.38 ಕೋಟಿ ರೂಪಾಯಿ ಪಂಗನಾಮ ಹಾಕಿರುವುದಾಗಿ ಮಾಹಿತಿ ಲಭ್ಯವಾಗಿದೆ.
ಮಹಿಳಾ ಗ್ರಾಹಕರಿಗೆ ಸಂಬಂಧಿಸಿದ 3.38 ಕೋಟಿ ಹಣ ಲೂಟಿ ಮಾಡಲಾಗಿದೆ ಎಂದು ಹಿರೇಕೆರೂರು ಶಹರ ಪೊಲೀಸ್ ಠಾಣೆಯಲ್ಲಿ ಪ್ರಭಾರ ಕೇಂದ್ರ ವ್ಯವಸ್ಥಾಪಕ ಶಿವಾನಂದಪ್ಪ ದ್ಯಾವನಕಟ್ಟೆ ಮತ್ತು ಕ್ಷೇತ್ರ ಕಚೇರಿ ವ್ಯವಸ್ಥಾಪಕ ಬಸವರಾಜಯ್ಯ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿತ್ತು. ದೂರು ಆಧರಿಸಿ ಓರ್ವ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಹಿಳೆಯರಿಗೆ 1.25 ಲಕ್ಷದವರೆಗೆ ಸಾಲ ನೀಡಲಾಗುತ್ತಿತ್ತು. ಮಹಿಳಾ ಸದಸ್ಯರ ದಾಖಲೆ ಬಳಸಿಕೊಂಡು ವಂಚನೆ ಮಾಡಲಾಗಿದೆ. 376 ಮಹಿಳಾ ಸದಸ್ಯರಿಗೆ 643 ಸಾಲದ ಯೋಜನೆ ನೀಡಿದಂತೆ ನಕಲಿ ಸಾಲ ಸೃಷ್ಟಿಸಿ 4.16 ಕೋಟಿ ಸಾಲ ನೀಡಿರುವಂತೆ ನಕಲಿ ದಾಖಲೆ ಸೃಷ್ಟಿಸಿ ವಂಚಿಸಲಾಗಿದೆ.
ಆರೋಪಿಗಳೂ ತಾವೇ ಸಾಲ ಪಡೆದುಕೊಂಡು ಕಂತಿನ ಹಣವನ್ನು ತಾವೇ ಸಂಸ್ಥೆಗೆ ಜಮೆ ಮಾಡುತ್ತಿದ್ದರು. ನಕಲಿ ಸಾಲದ 87.33 ಲಕ್ಷ ಮಾತ್ರ ಜಮಾ ಮಾಡಿದ್ದರು. ಉಳಿದ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಆರೋಪಿಗಳು ಕಚೇರಿಯಲ್ಲಿ ನಕಲಿ ಕ್ಯಾಶ್ ಬುಕ್ ತಯಾರಿಸಿಕೊಂಡಿದ್ದರು.
ಸದ್ಯ ಮಹಿಳೆಯರಿಗೆ ಗೊತ್ತಿಲ್ಲದೆ ಅವರ ಹೆಸರಲ್ಲಿ ವಂಚನೆ ಮಾಡಿದ ಬಗ್ಗೆ ತಿಳಿಯುತ್ತಿದ್ದಂತೆ ಪ್ರಕರಣ ದಾಖಲಿಸಲಾಗಿದೆ. ಆದರೆ ಈ ಪ್ರಕರಣದಲ್ಲಿ ಓರ್ವನ ಬಂಧನವಾಗಿದ್ದು ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ.