Thursday, April 3, 2025
Google search engine

Homeರಾಜ್ಯಚಾಮರಾಜನಗರದ ನಾಗಮಲೆಗೆ ಮುಕ್ತ ಪ್ರವೇಶಕ್ಕೆ ಅವಕಾಶ

ಚಾಮರಾಜನಗರದ ನಾಗಮಲೆಗೆ ಮುಕ್ತ ಪ್ರವೇಶಕ್ಕೆ ಅವಕಾಶ

ಹನೂರು: ಚಾಮರಾಜನಗರ ಜಿಲ್ಲೆಯ ಹನೂರಿನ ನಾಗಮಲೆಗೆ ತೆರಳುವ ಮಾದಪ್ಪನ ಭಕ್ತರಿಗೆ ಅರಣ್ಯ ಇಲಾಖೆ ಗುಡ್ ನ್ಯೂಸ್ ಕೊಟ್ಟಿದ್ದು, ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ನಾಗಮಲೆ ಮುಕ್ತ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಇಷ್ಟು ದಿನ ಆನ್ ಲೈನ್​ನಲ್ಲಿ ನೋಂದಣಿ ಮಾಡಿಸಿಕೊಂಡು 200 ರೂ. ಶೂಲ್ಕ ಪಾವತಿಸಬೇಕಿತ್ತು. ಆದರೆ, ಇನ್ಮುಂದೆ ದೀಪಾವಳಿ, ಶಿವರಾತ್ರಿ ಹಾಗೂ ಯುಗಾದಿ ಹಬ್ಬಕ್ಕೆ ಉಚಿತ ಪ್ರವೇಶ ಕಲ್ಪಿಸಲಾಗುವುದು.

ಮಾದಪ್ಪನ ಭಕ್ತರಿಗೆ ಮಾತ್ರವಲ್ಲದೆ ಚಾರಣ ಪ್ರಿಯರಿಗೆ ಕೂಡ ನಾಗಮಲೆ ಅತ್ಯಂತ ಇಷ್ಟವಾದ ಸ್ಥಳ. ಇಲ್ಲಿಗೆ ತೆರಳಲು ಆನ್​ಲೈನ್​ನಲ್ಲಿ ನೋಂದಣಿ ಮಾಡಲು ಪರದಾಡುತ್ತಿದ್ದ ಮಾದಪ್ಪನ ಭಕ್ತರು ಈಗ ಉಚಿತವಾಗಿ ಪ್ರವೇಶಿಸಬಹುದು. ಅರಣ್ಯ ಇಲಾಖೆ ಪ್ರತಿದಿನ ಕೇವಲ 200 ಮಂದಿಗೆ ಮಾತ್ರ ಅವಕಾಶ ಕಲ್ಪಿಸಿತ್ತು. ಇನ್ಮುಂದೆ ಪ್ರಮುಖ ಮೂರು ಹಬ್ಬಗಳಿಗೆ ಉಚಿತ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.

ಅರಣ್ಯ ಇಲಾಖೆಯ ನಡೆಯಿಂದ ಮಾದಪ್ಪನ ಭಕ್ತರು ಖುಷಿಯಾಗಿದ್ದಾರೆ. ಅಂದಹಾಗೆ, ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ನಾಗಮಲೆ ಮಲೆಮಹದೇಶ್ವರ ಬೆಟ್ಟದಿಂದ 15 ಕಿ.ಮೀ. ದೂರದಲ್ಲಿದೆ. 77 ಮಲೆಗಳ ನಾಡು ಎಂದು ಹೆಸರಾಗಿರುವ ಮಲೆಮಹದೇಶ್ವರ ಕ್ಷೇತ್ರದಲ್ಲಿ ನಾಗಮಲೆ ಕೂಡ ಒಂದು ಪ್ರಮುಖ ಆಧ್ಯಾತ್ಮಕ ಸ್ಥಳವಾಗಿದೆ.

ನಾಗಮಲೆಯಲ್ಲಿ ಮಹದೇಶ್ವರ ಸ್ವಾಮಿಯ ವಿಗ್ರಹ ಕಲ್ಲಿನ ರೂಪದಲ್ಲಿದೆ. ಅದಕ್ಕೆ ಹಾವಿನ ಹೆಡೆಯ ಕಲ್ಲಿನ ಆಕೃತಿ ನೆರಳಾಗಿದೆ. ಬೆಟ್ಟಗಳ ಮೇಲಿರುವ ಈ ಕ್ಷೇತ್ರಕ್ಕೆ ಹೋಗಲು ದೊಡ್ಡ ದಾರಿಯಿಲ್ಲ. ಕಾಲುದಾರಿಯಲ್ಲೇ ಬೆಟ್ಟ ಹತ್ತಿ ಹೋಗಬೇಕು. ಈ ಬೆಟ್ಟ ಹತ್ತುವುದು ಸುಲಭವೇನಲ್ಲ. ಕಡಿದಾದ ದಾರಿಯಲ್ಲಿ ಬೆಟ್ಟವೇರಲು ಅನೇಕ ಚಾರಣಿಗರು ಕೂಡ ಬರುತ್ತಾರೆ.

RELATED ARTICLES
- Advertisment -
Google search engine

Most Popular