ಕೆ.ಆರ್.ನಗರ: ಲಯನ್ಸ್ ಕ್ಲಬ್ ಆಫ್ ಮೈಸೂರು ಕೃಷ್ಣರಾಜ ಮತ್ತು ಲಯನ್ಸ್ ಕ್ಲಬ್ ಸೆಂಟ್ರಲ್ ಮೈಸೂರು ಹಾಗು ಕಾಂಗ್ರೆಸ್ ಪಕ್ಷದ ವತಿಯಿಂದ ವಾಕ್(ಮಾತು), ಶ್ರವಣ(ಕಿವಿ) ದೋಷವಿರುವವರಿಗೆ ಪಟ್ಟಣದ ಪುರಸಭೆಯ ಬಯಲು ರಂಗ ಮಂದಿರದಲ್ಲಿ ಏರ್ಪಡಿಸಿದ್ದ ಉಚಿತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರಕ್ಕೆ ಶಾಸಕ ಡಿ.ರವಿಶಂಕರ್ ಚಾಲನೆ ನೀಡಿದರು.
ಆನಂತರ ಮಾತನಾಡಿದ ಶಾಸಕರು, ಉಚ್ಚಾರಣೆ ತೊಂದರೆ, ಭಾಷೆ ತೊಂದರೆ, ಕಲಿಕೆ, ಕಿವಿ ಕೇಳದಿರುವುದು ಸೇರಿದಂತೆ ಕಿವಿ ಮತ್ತು ಗಂಟಲು ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿದು ಉಚಿತವಾಗಿ ಚಿಕಿತ್ಸೆ ನೀಡಿ ಅವಶ್ಯಕವಿರುವವರಿಗೆ ಸಲಕರಣೆ ನೀಡಲಾಗುತ್ತದೆ ಇದನ್ನು ಕ್ಷೇತ್ರದ ಜನತೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಭೇರ್ಯದ ಸಾರ್ವಜನಿಕ ಆಸ್ಪತ್ರೆ ಆವರಣ, ಸಾಲಿಗ್ರಾಮದ ಸಮುದಾಯ ಆರೋಗ್ಯ ಕೇಂದ್ರ, ಹೊಸೂರು ಬಸ್ ನಿಲ್ದಾಣ ಮತ್ತು ಹೊಸಕೋಟೆ ಗ್ರಾಮದ ಕುರ್ಜು ಆವರಣದಲ್ಲಿ ಏರ್ಪಡಿಸಲಾಗಿದ್ದು, ಅಕ್ಟೋಬರ್ ೧೨ರವರೆಗೆ ನಡೆಸುವ ಶಿಬಿರದಲ್ಲಿ ತೊಂದರೆ ಇರುವವರು ಪಾಲ್ಗೊಂಡು ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಕೋರಿದ ಶಾಸಕರು ಕಿವಿ ಮತ್ತು ಗಂಟಲಿಗೆ ಸಂಬಂಧಿಸಿದ ಸಲಕರಣೆ ಪಡೆಯಲು ಸಾವಿರಾರು ರೂ ವೆಚ್ಚವಾಗಲಿದೆ ಆದ್ದರಿಂದ ಅವುಗಳನ್ನು ಉಚಿತವಾಗಿ ಕೊಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸಾರ್ವಜನಿಕರಿಗೆ ಮತ್ತು ಬಡ ಜನತೆಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಈ ರೀತಿಯ ಆರೋಗ್ಯ ಶಿಬಿರಗಳನ್ನು ಆಗಿದ್ದಾಗೆ ನಡೆಸಲಾಗುತ್ತದೆ. ಇದರ ಜತೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಆರೋಗ್ಯ ಸೇವೆ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದ ಶಾಸಕರು ವೈದ್ಯರು ಮತ್ತು ಆರೋಗ್ಯ ಕೇಂದ್ರದ ಸಿಬ್ಬಂದಿಗಳು ರೋಗಿಗಳು ಮತ್ತು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ ಗುಣಮಟ್ಟದ ಚಿಕಿತ್ಸೆ ನೀಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಕ್ಲಬ್ ವತಿಯಿಂದ ಸಾರ್ವಜನಿಕ ಆಸ್ಪತ್ರೆಗೆ ಮೂರು ವಿಲ್ ಚೇರ್‌ಗಳನ್ನು ವಿತರಿಸಲಾಯಿತು. ಕ್ಲಬ್ ನ ಜಿಲ್ಲಾ ಗೌರ್ವನರ್ ಕೃಷ್ಣೇಗೌಡ, ಅಧ್ಯಕ್ಷ ದೇವೇಗೌಡ, ಕಾರ್ಯದರ್ಶಿ ಮೋಹನ್, ಪದಾಧಿಕಾರಿಗಳಾದ ಬಿ.ಎಂ.ಆಕಾಶ್, ವನಿತಾದೇವಯ್ಯ, ಸೋಮಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್.ಮಹದೇವ್, ಉದಯಶಂಕರ್, ಯುವ ಕಾಂಗ್ರೆಸ್ ಅಧ್ಯಕ್ಷ ಆನಂದ್, ಅಡಗೂರು ಗ್ರಾ.ಪಂ. ಅಧ್ಯಕ್ಷ ಮಹದೇವ್, ಮುಖಂಡರಾದ ಪಂಚಾಕ್ಷರಿ, ಕೆ.ಎನ್.ಪ್ರಸನ್ನ, ಬ್ಯಾಡರಹಳ್ಳಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.