ಬೆಂಗಳೂರು: ರಾಜ್ಯ ಸಾರಿಗೆ ಇಲಾಖೆ ವಾಹನ ಸವಾರರಿಗೆ ತಮ್ಮ ವಾಹನಗಳಿಗೆ ಎಚ್ಎಸ್ಆರ್ ಪಿ ನಂಬರ್ ಪ್ಲೇಟ್ ಅಳವಡಿಸಲು ಡೆಡ್ ಲೈನ್ ನೀಡಿದೆ. ಅಳವಡಿಸದೇ ಇದ್ದಲ್ಲಿ ದಂಡದ ಬರೆ ಹಾಕುವ ಎಚ್ಚರಿಕೆ ನೀಡಿದೆ.
ಸಾರಿಗೆ ಇಲಾಖೆ ಗಡುವು ನೀಡಿದ್ದರೂ ಎಚ್ಎಸ್ಆರ್ ಪಿ (High Security registration plate) ನಂಬರ್ ಪ್ಲೇಟ್ ಅಳವಡಿಸಲು ಹಿಂದೇಟು ಹಾಕಿದ್ದರು. ಹೀಗಾಗಿ ಬೇರೆ ದಾರಿಯಿಲ್ಲದೇ ಸಾರಿಗೆ ಇಲಾಖೆ ದಂಡ ಪ್ರಯೋಗಕ್ಕೆ ಮುಂದಾಗಿದೆ. ಫೆಬ್ರವರಿ 17 ರಿಂದ ಎಚ್ಎಸ್ಆರ್ ಪಿ ನಂಬರ್ ಪ್ಲೇಟ್ ಇಲ್ಲದೇ ಇದ್ದರೆ ವಾಹನ ಸವಾರರಿಗೆ ಒಂದರಿಂದ ಎರಡು ಸಾವಿರ ರೂ.ವರೆಗೆ ದಂಡ ವಿಧಿಸಲು ಮುಂದಾಗಿದೆ.
ಮೊದಲ ಬಾರಿಗೆ ಸಿಕ್ಕಿಬಿದ್ದರೆ ಒಂದು ಸಾವಿರ ರೂ., ಎರಡನೇ ಬಾರಿಗೆ ಸಿಕ್ಕಿಬಿದ್ದರೆ ಎರಡು ಸಾವಿರ ರೂ. ದಂಡ ವಿಧಿಸಬೇಕಾಗುತ್ತದೆ ಎಂದು ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದೆ. ಇದಕ್ಕೆ ಮೊದಲು ಸಾರಿಗೆ ಇಲಾಖೆ 2023 ರ ನವಂಬರ್ 17 ವರವರೆಗೆ ಎಚ್ಎಸ್ಆರ್ ಪಿ ನಂಬರ್ ಪ್ಲೇಟ್ ಹಾಕಿಸಲು ಗಡುವು ನೀಡಿತ್ತು.
ಆದರೆ ಈ ಗಡುವನ್ನು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ಇದುವರೆಗೆ ಕೇವಲ 10 ಲಕ್ಷ ವಾಹನಗಳಿಗೆ ಮಾತ್ರ ನಂಬರ್ ಪ್ಲೇಟ್ ಹಾಕಲಾಗಿದೆ. ಆದರೆ ಇದಕ್ಕೆ ವಾಹನ ಚಾಲಕರಿಂದಲೂ ಆಕ್ಷೇಪ ಕೇಳಿಬಂದಿದೆ. ಕನಿಷ್ಠ ಒಂದು ವರ್ಷವಾದರೂ ಗಡುವು ನೀಡಬೇಕು ಎಂಬ ಒತ್ತಾಯ ಕೇಳಿಬಂದಿದೆ. ಆದರೆ ಇದಕ್ಕೆ ಸಾರಿಗೆ ಇಲಾಖೆ ಕಿವಿಗೊಡುತ್ತಿಲ್ಲ.