ಚಿಂತಾಮಣಿ : ನಗರದ ಜೋಡಿ ರಸ್ತೆಯಲ್ಲಿರುವ ಸೌಂದರ್ಯ ಜ್ಯೂವೆಲರಿ ಕಮ್ ಜವಳಿ ಅಂಗಡಿಯಲ್ಲಿ ಬ್ಲೌಸ್ ಪೀಸ್ ಖರೀದಿಸುವ ಸೋಗಿನಲ್ಲಿ ಆಗಮಿಸಿದ್ದ ೫ ಜನ ಮಹಿಳೆಯರ ಗುಂಪು ಮಾಲೀಕನ ಕಣ್ತಪ್ಪಿಸಿ ಸುಮಾರು ೧೦ ಲಕ್ಷ ರೂ. ಬೆಲೆ ಬಾಳುವ ಆಭರಣಗಳ ಬಾಕ್ಸ್‌ನ್ನು ಕದ್ದು ಪರಾರಿಯಾಗಿದ್ದಾರೆ.
ಬುರ್ಖಾ ಧರಿಸಿದ್ದ ೫ ಜನ ಮಹಿಳೆಯರ ಗುಂಪು ಬ್ಲೌಸ್ ಪೀಸ್ ಖರೀದಿಸುವ ನೆಪದಲ್ಲಿ ಮಧ್ಯಾಹ್ನ ಸುಮಾರು ೧ ಗಂಟೆ ಸಮಯದಲ್ಲಿ ಅಂಗಡಿಗೆ ಆಗಮಿಸಿದ್ದಾರೆ. ಕೆಲವರು ಬ್ಲೌಸ್ ಖರೀಸಲು ಪೀಸ್‌ಗಳ ಕಟ್ಟುಗಳನ್ನು ತೆಗೆಸಿ ವ್ಯಾಪಾರ ಮಾಡುವಲ್ಲಿ ನಿರತರಾಗಿದ್ದಾರೆ. ಅದೇ ಸಮಯದಲ್ಲಿ ಅಂಗಡಿಯಲ್ಲಿ ನಡೆಯುತ್ತಿದ್ದ ವ್ಯವಹಾರವನ್ನೆಲ್ಲ ಗಮನಿಸಿದ್ದಾರೆ. ಸುಮಾರು ಅರ್ಧ ಗಂಟೆ ಕಾಲ ವ್ಯಾಪಾರದ ಸೋಗಿನಲ್ಲಿ ಕಾಲ ಕಳೆದಿದ್ದಾರೆ. ಸಮಯ ಸಾಧಿಸಿ ೧೨೦ ರಿಂದ ೧೪೦ ಗ್ರಾಂ ತೂಕವಿರುವ ೧೮ ಜೊತೆ ಓಲೆಗಳ ಒಂದು ಬಾಕ್ಸ್‌ನ್ನು ಕದ್ದುಕೊಂಡು ಹೋಗಿದ್ದಾರೆ, ಕೂಲಿ, ವೇಸ್ಟೇಜ್ ಎಲ್ಲ ಸೇರಿ ಸುಮಾರು ೧೦ ಲಕ್ಷ ರೂ ಬೆಲೆ ಬಾಳುತ್ತದೆ ಎಂದು ಮಾಲೀಕರು ದೂರು ನೀಡಿದ್ದಾರೆ.
ನಾಲ್ಕು ಬ್ಲೌಸ್ ಪೀಸ್ ಖರೀದಿಸಿಕೊಂಡು ಹೋದ ನಂತರ ಸಹಜವಾಗಿ ಎಲ್ಲವನ್ನು ಪರೀಕ್ಷಿಸಿಕೊಂಡಾಗ ಓಲೆಗಳ ಬಾಕ್ಸ್ ಕಳ್ಳತನವಾಗಿರುವುದು ಗೊತ್ತಾಯಿತು. ಎಲ್ಲರೂ ಉರ್ದು ಮಾತನಾಡುತ್ತಿದ್ದರು ಎಂದು ಮಾಲೀಕ ರಾಜೇಶ್ ತಿಳಿಸಿದರು.
ಪೊಲೀಸರು ಅಂಗಡಿಗೆ ಭೇಟಿ ನೀಡಿ, ಬೆರಳಚ್ಚು ತಂಡ ಹಾಗೂ ಶ್ವಾನದಳದೊಂದಿಗೆ ಪರಿಶೀಲನೆ ನಡೆಸಿದರು. ಎಸ್ಪಿ ಕುಶಾಲಚೌಕ್ಸೆ, ಡಿವೈಎಸ್ಪಿ ಮುರಳೀಧರ್, ಇನ್ಸ್ ಸ್ಪೆಕ್ಟರ್ ವಿಜಿಕುಮಾರ್ ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶಿಲಿಸಿದರು. ಭಾನುವಾರ ನಗರದಲ್ಲಿ ಸಂತೆ ನಡೆಯುತ್ತಿದ್ದು ಹೆಚ್ಚಿನ ಜನಸಂದಣಿ ಹೊಂದಿರುತ್ತದೆ. ಮಟ ಮಟ ಮಧ್ಯಾಹನವೇ ಅಂಗಡಿಯನ್ನು ಬಂಗಾರದ ಆಭರಣವನ್ನು ಕದ್ದು ಪರಾರಿಯಾಗಿರುವುದು ವ್ಯಾಪಾರಿಗಳಲ್ಲಿ ಆತಂಕ ಮೂಡಿಸಿದೆ.