ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಇನ್ಮುಂದೆ 33% ಅಂಕ ಪಡೆದರೆ ಉತ್ತೀರ್ಣ ಎಂದು ಘೋಷಿಸಲಾಗುವುದು. ಈ ವರ್ಷದಿಂದಲೇ ಖಾಸಗಿ ಶಾಲೆಗಳಿಗೂ ಇದು ಅನ್ವಯ ಆಗಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಈ ಕುರಿತು ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಪ್ರಸಕ್ತ ವರ್ಷದಿಂದ 33% ಅಂಕ ಪಡೆದರೆ ಎಸ್ಎಸ್ಎಲ್ಸಿ ಪಾಸ್ ಎಂದು ಘೋಷಿಸಲಾಗುವುದು. ಅಲ್ಲಿಗೆ 625ಕ್ಕೆ 206 ಅಂಕ ಪಡೆದರೆ ವಿದ್ಯಾರ್ಥಿಗಳು ಉತ್ತೀರ್ಣವಾಗಲಿದ್ದಾರೆ. ಆಂತರಿಕ ಅಂಕ, ಬಾಹ್ಯ ಅಂಕ ಎರಡು ಸೇರಿ 33% ಪಡೆಯಬೇಕಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.
ಪರೀಕ್ಷಾ ವ್ಯವಸ್ಥೆ ಸುಧಾರಣೆಗೆ 3 ಪರೀಕ್ಷೆ ವ್ಯವಸ್ಥೆ ಜಾರಿ ಮಾಡಿದ್ದೇವೆ. ಪಾರದರ್ಶಕವಾಗಿ ಇರಲಿ ಅಂತ ವೆಬ್ ಕ್ಯಾಸ್ಟ್ ಮಾಡಿದ್ದೆವು. ಪರೀಕ್ಷೆಗಳು ಉತ್ತಮವಾಗಿ ನಡೆದವು. ವೆಬ್ ಕ್ಯಾಸ್ಟಿಂಗ್ ನಿಂದ ಕಡಿಮೆ ಅಂಕ ಬಂದಾಗ ಶಿಕ್ಷಕರು ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡಿದರು. ವಿಶೇಷ ತರಗತಿ ಪಡೆದು ವಿದ್ಯಾರ್ಥಿಗಳನ್ನ ತಯಾರು ಮಾಡಿದರು. ಆದ್ದರಿಂದ ಉತ್ತಮ ಫಲಿತಾಂಶ ಬಂದಿದೆ ಎಂದು ವಿವರಿಸಿದರು.
ಇದೀಗ ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ ತರಲು 33% ಪಾಸಿಂಗ್ ಅಂಕ ನಿಗದಿ ಮಾಡಲಾಗಿದೆ. 625ಕ್ಕೆ 206 ಅಂಕ ಪಡೆದರೆ ಅಥವಾ ಆಯಾ ವಿಷಯದ ಒಟ್ಟು ಅಂಕಗಳಲ್ಲಿ 30 ಅಂಕ ಪಡೆದಿರಬೇಕು. ಆಂತರಿಕ ಮತ್ತು ಬಾಹ್ಯ ಅಂಕ ಸೇರಿ ಒಟ್ಟು 33% ಅಂಕ ಪಡೆದ ವಿದ್ಯಾರ್ಥಿಯನ್ನು ಉತ್ತೀರ್ಣ ಎಂದು ಘೋಷಿಸಲಾಗುತ್ತದೆ ಎಂದು ತಿಳಿಸಿದರು.
2025-26ನೇ ಸಾಲಿನಿಂದ ಈ ನಿಯಮ ಜಾರಿಗೆ ಬರಲಿದೆ. ಈ ವರ್ಷ ಹಾಜರಾಗುವ ಎಲ್ಲಾ ವಿದ್ಯಾರ್ಥಿಗಳು, ರಿಪೀಟರ್ಸ್, ಖಾಸಗಿ ಅಭ್ಯರ್ಥಿಗಳಿಗೂ ಈ ನಿಯಮ ಜಾರಿಯಾಗಲಿದೆ ಎಂದು ತಿಳಿಸಿದರು.