ಬೆಂಗಳೂರು: ”ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು 2024-25ನೇ ಸಾಲಿನ ದ್ವಿತೀಯ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳ ವೇಳಾಪಟ್ಟಿಯನ್ನು ಈಗಾಗಲೇ ಪ್ರಕಟಿಸಿದೆ. ಜೊತೆಗೆ, ಸುಗಮ ಮತ್ತು ನ್ಯಾಯಯುತ ಪರೀಕ್ಷಾ ಪ್ರಕ್ರಿಯೆ ಕೈಗೊಳ್ಳಲು ಹಲವು ಕ್ರಮಗಳನ್ನೂ ರೂಪಿಸಲಾಗಿದೆ” ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದರು.
ಈ ಬಗ್ಗೆ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ”ವಿದ್ಯಾರ್ಥಿಗಳ ಕಾರ್ಯಕ್ಷಮತೆ ಸುಧಾರಣೆ ಮತ್ತು ಪರೀಕ್ಷಾ ವ್ಯವಸ್ಥೆಯ ಸಮಗ್ರತೆ ಕಾಪಾಡಿಕೊಳ್ಳಲು ಸರ್ಕಾರ ಬದ್ಧವಾಗಿದೆ. ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಮಾರ್ಚ್ 1ರಿಂದ ಮಾರ್ಚ್ 20ರ ವರೆಗೆ ನಡೆಸಲಾಗುವುದು. ಬಳಿಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮಾರ್ಚ್ 21ರಿಂದ ಏಪ್ರಿಲ್ 4ರವರೆಗೆ ನಡೆಯಲಿವೆ. ಮಂಡಳಿಯು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ವಿವರವಾದ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಿದೆ ಎಂದು ತಿಳಿಸಿದರು.
“ನ್ಯಾಯಯುತ ಮತ್ತು ಪಾರದರ್ಶಕವಾಗಿ ಪರೀಕ್ಷೆ ನಡೆಸಲು ನಾವು ಬದ್ಧರಾಗಿದ್ದೇವೆ. ಯಾವುದೇ ನಕಲು, ದುಷ್ಕೃತ್ಯ ತಡೆಗಟ್ಟಲು ಕಠಿಣ ಕ್ರಮಗಳನ್ನು ಜಾರಿಗೆ ತರಲಾಗಿದೆ. ವಾರಕ್ಕೊಮ್ಮೆ ಎರಡು ಸಭೆಗಳು ಮತ್ತು ಪ್ರಗತಿ ವರದಿಗಳ ಮೂಲಕ ಪೋಷಕರು ತಮ್ಮ ಮಕ್ಕಳ ಶಿಕ್ಷಣದಲ್ಲಿ ಹೇಗೆ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂಬುದರ ಬಗ್ಗೆ ನಾವು ಗಮನಿಸುತ್ತಿದ್ಧೇವೆ” ಎಂದು ಸಚಿವರು ಹೇಳಿದರು.
34,071 ಪುನರಾವರ್ತಿ ಅಭ್ಯರ್ಥಿಗಳು: ಪಿಯುಸಿ ಪರೀಕ್ಷೆಗೆ ಒಟ್ಟು 7,13,862 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 6,61,474 ಹೊಸ ಅಭ್ಯರ್ಥಿಗಳು, 34,071 ಪುನರಾವರ್ತಿತರು ಮತ್ತು 18,317 ಖಾಸಗಿ ಅಭ್ಯರ್ಥಿಗಳು ಸೇರಿದ್ದಾರೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಒಟ್ಟು 8,96,447 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 8,42,817 ಹೊಸ ಅಭ್ಯರ್ಥಿಗಳು, 38,091 ಪುನರಾವರ್ತಿತರು ಮತ್ತು 15,539 ಖಾಸಗಿ ಅಭ್ಯರ್ಥಿಗಳು ಇದ್ದಾರೆ.
ದ್ವಿತೀಯ ಪಿಯುಸಿ ಪರೀಕ್ಷೆಗೆ 1,171 ಕೇಂದ್ರಗಳು ಮತ್ತು ಎಸ್‌ಎಸ್‌ಎಲ್‌ಸಿಗೆ 2,818 ಕೇಂದ್ರಗಳನ್ನು ಗುರುತಿಸಲಾಗಿದೆ. 2,342 ಸ್ಥಳೀಯ ಜಾಗೃತ ತಂಡಗಳು ಮತ್ತು 1,662 ಫ್ಲೈಯಿಂಗ್ ಸ್ಕ್ವಾಡ್‌ಗಳನ್ನು ನಿಯೋಜಿಸಲಾಗುವುದು. ಜೊತೆಗೆ, ನ್ಯಾಯಯುತ ಮತ್ತು ಸುರಕ್ಷಿತ ಪರೀಕ್ಷೆಗಾಗಿ ಸಾಕಷ್ಟು ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ.
ವಿದ್ಯಾರ್ಥಿಗಳ ಕಾರ್ಯಕ್ಷಮತೆ ಸುಧಾರಿಸುವ ನಿಟ್ಟಿನಲ್ಲಿ ಎಸ್‌ಎಸ್‌ಎಲ್‌ಸಿ ಮಧ್ಯವಾರ್ಷಿಕ (SA-01) ಪರೀಕ್ಷೆಯನ್ನು ಸೆಪ್ಟೆಂಬರ್ 24, 2024ರಿಂದ ಅಕ್ಟೋಬರ್ 1ರವರೆಗೆ ನಡೆಸಲಾಗಿದೆ. ಹೆಚ್ಚುವರಿಯಾಗಿ, ಫೆಬ್ರವರಿ 25ರಿಂದ ಮಾರ್ಚ್ 4ರವರೆಗೆ ಜಿಲ್ಲಾ ಮಟ್ಟದಲ್ಲಿ ಪ್ರಾಥಮಿಕ ಪರೀಕ್ಷೆಯನ್ನು ನಡೆಸಲಾಗುವುದು. ವಿದ್ಯಾರ್ಥಿಗಳ ಕಲಿಕೆಯ ಅಂತರವನ್ನು ತ್ವರಿತವಾಗಿ ಸರಿಪಡಿಸಲು ಅದೇ ದಿನದಂದು ಮೌಲ್ಯಮಾಪನ ಪ್ರಕ್ರಿಯೆಯೂ ನಡೆಯಲಿದೆ.
ಮಂಡಳಿಯ ವೆಬ್‌ಸೈಟ್‌ನಲ್ಲಿ ಮಾದರಿ ಪ್ರಶ್ನೆ ಪತ್ರಿಕೆ ಲಭ್ಯ: ಪರೀಕ್ಷಾ ಫಲಿತಾಂಶ ಉತ್ತಮಪಡಿಸಲು ಆಯುಕ್ತರು, ಜಿಲ್ಲಾಧಿಕಾರಿಗಳು ಮತ್ತು ಸಿಇಒಗಳನ್ನು ಒಳಗೊಂಡ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ನೇತೃತ್ವದಲ್ಲಿ ಮಾಸಿಕ ಪರಿಶೀಲನಾ ಸಭೆಗಳನ್ನು ನಡೆಸಲಾಗುತ್ತಿದೆ. ಇದಲ್ಲದೆ, ಶೈಕ್ಷಣಿಕ ಸುಧಾರಣೆಗಾಗಿ ಜಿಲ್ಲಾ ಅಧಿಕಾರಿಗಳು ಮತ್ತು ಪದವಿ ಪೂರ್ವ ಶಿಕ್ಷಕರ ನಿಯಮಿತ ಮೇಲ್ವಿಚಾರಣೆಯಲ್ಲಿ 20 ಅಂಶಗಳ ಕಾರ್ಯಕ್ರಮವನ್ನು ರೂಪಿಸಲಾಗಿದೆ. ವಿದ್ಯಾರ್ಥಿಗಳ ಪರೀಕ್ಷಾ ತಯಾರಿಗಾಗಿ ನೆರವಾಗಲು ಪಿಯುಸಿಗೆ ಮೂರು ಸೆಟ್ ಮಾದರಿ ಪ್ರಶ್ನೆ ಪತ್ರಿಕೆಗಳು ಹಾಗೂ ಎಸ್‌ಎಸ್‌ಎಲ್‌ಸಿಗೆ ನಾಲ್ಕು ಸೆಟ್‌ಗಳು ಮಂಡಳಿಯ ವೆಬ್‌ಸೈಟ್‌ನಲ್ಲಿ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗಿದೆ.
ಪರೀಕ್ಷಾ ಕೇಂದ್ರಗಳಲ್ಲಿ ವೆಬ್‌ಕಾಸ್ಟಿಂಗ್ ವ್ಯವಸ್ಥೆ: ಪರೀಕ್ಷೆ ಸುಲಲಿತವಾಗಿ ನಡೆಯಲು ಜಿಲ್ಲಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಜಾರಿಗೆ ತರಲಾಗುವುದು. ಹೆಚ್ಚುವರಿಯಾಗಿ, ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗುವುದು. ಇದರಿಂದಾಗಿ ಪರೀಕ್ಷಾ ದಿನಗಳಲ್ಲಿ ಈ ವಲಯಗಳಲ್ಲಿನ ಜೆರಾಕ್ಸ್ ಸೆಂಟರ್, ಸೈಬರ್ ಮತ್ತು ಕಂಪ್ಯೂಟರ್ ಕೇಂದ್ರಗಳನ್ನು ಮುಚ್ಚಲಾಗುತ್ತದೆ. ಅಲ್ಲದೆ, ಪರೀಕ್ಷಾ ಕೇಂದ್ರಗಳಲ್ಲಿ ಸಾಕಷ್ಟು ಪೊಲೀಸ್ ಭದ್ರತಾ ವ್ಯವಸ್ಥೆ ಕಲ್ಪಿಸಲಾಗುವುದು. ಶಿಕ್ಷಣ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಅಥವಾ ಪರೀಕ್ಷಾ ಅಕ್ರಮಗಳ ಯಾವುದೇ ನಿದರ್ಶನಗಳು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು.
ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ಪ್ರವೇಶ ಪತ್ರಗಳನ್ನು ಫೆಬ್ರವರಿ 18ರಂದು ಎಲ್ಲಾ ಪ್ರಾಂಶುಪಾಲರಿಗೆ ಹಸ್ತಾಂತರಿಸಲಾಗಿದೆ. ಪರೀಕ್ಷೆಗಳ ಮೇಲ್ವಿಚಾರಣೆಗೆ ಮುಖ್ಯ ಅಧೀಕ್ಷಕರು, ಉಪ/ಜಂಟಿ ಮುಖ್ಯ ಅಧೀಕ್ಷಕರು ಮತ್ತು ಕಸ್ಟೋಡಿಯನ್‌ಗಳನ್ನು ನೇಮಿಸಲಾಗಿದೆ. ಎಸ್‌ಎಸ್‌ಎಲ್‌ಸಿಗೆ 31,000 ಮತ್ತು ಪಿಯುಸಿಗೆ 65,000 ಮೌಲ್ಯಮಾಪಕರು ನಿಗದಿತ ಕೇಂದ್ರಗಳಲ್ಲಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಸಲಿದ್ದಾರೆ.