ಮಂಗಳೂರು (ದಕ್ಷಿಣ ಕನ್ನಡ): ಬಂಟ್ವಾಳದ ಸಮಾಜ ಸೇವಾ ಸಹಕಾರಿ ಸಂಘ ನಿಯಮಿತ(ಬ್ಯಾಂಕ್)ದ ಪಡೀಲು ಶಾಖೆಯಲ್ಲಿ ನಕಲಿ ಚಿನ್ನವಿಟ್ಟು 2 ಕೋಟಿ ರೂ.ಗಳಿಗೂ ಅಧಿಕ ಸಾಲ ಪಡೆದ ವಂಚನೆ ಪ್ರಕರಣದಲ್ಲಿ ನಿಯಮಾನುಸಾರ ಬಾಕಿಯನ್ನು ಸಂಪೂರ್ಣವಾಗಿ ವಸೂಲಾತಿ ಮಾಡಲಾಗಿದೆ ಎಂದು ಸಂಘದ ಪ್ರಧಾನ ವ್ಯವಸ್ಥಾಪಕ ಬೋಜ ಮೂಲ್ಯ ತಿಳಿಸಿದ್ದಾರೆ.
ಮಂಗಳೂರು ನಗರದ ಪ್ರೆಸ್ ಕ್ಲಬ್ ನಲ್ಲಿ ಗುರುವಾರ ಸಹಕಾರಿ ಬ್ಯಾಂಕ್ ನ ಕಳೆದ ಐದು ವರ್ಷಗಳ ಪ್ರಗತಿಯ ವಿವರ ನೀಡುವ ಸಂದರ್ಭ ಸುದ್ದಿಗಾರರ ಪ್ರಶ್ನೆಗೆ ಈ ಸ್ಪಷ್ಟನೆ ನೀಡಿದರು.
ಪಡೀಲ್ ಶಾಖೆಯಲ್ಲಿ ಪುತ್ತೂರಿನ ಅಬೂಬಕರ್ ಸಿದ್ದೀಕ್ ಎಂಬಾತ ಚಿನ್ನ ಲೇಪಿತ ಆಭರಣಗಳನ್ನು ಅಡವಿರಿಸಿ 2.11 ಕೋಟಿ ರೂ. ಸಾಲ ಪಡೆದಿದ್ದರು. ಹರಾಜು ಪ್ರಕ್ರಿಯೆ ಹಾಗೂ ಪ್ರಕರಣದ ಆರೋಪಿಗಳಲ್ಲಿ ಓರ್ವರಾದ ಸರಫರಿಂದ ವಸೂಲು ಮಾಡಿಕೊಂಡು ಬ್ಯಾಂಕ್ ಗೆ ಬರಬೇಕಾಗಿದ್ದ ಹಣವನ್ನು ಸಂಪೂರ್ಣವಾಗಿ ಜಮಾ ಮಾಡಲಾಗಿದೆ. ನಕಲಿ ಚಿನ್ನಾಭರಣ ಇರಿಸಿದ್ದ ಆರೋಪಿ ವಿರುದ್ಧ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ ತಲೆಮರೆಸಿಕೊಂಡಿದ್ದಾನೆ ಎಂದು ಅವರು ಹೇಳಿದರು.