ಚನ್ನಪಟ್ಟಣ: ರಾಮನಗರ-ಚನ್ನಪಟ್ಟಣ ಮಧ್ಯ ಭಾಗದ ಜಾನಪದ ಲೋಕದ ಹಿಂಭಾಗದ ರಾಜೀವ ಗಾಂಧಿ ವಿಶ್ವ ವಿದ್ಯಾಲಯ ಆವರಣದಲ್ಲಿ ಆರಂಭವಾಗ ಬೇಕಾಗಿದ್ದ ಕೆಂಗಲ್ ಹನುಮಂತಯ್ಯ ಮೆಡಿಕಲ್ ಕಾಲೇಜು ಸ್ಥಳಾಂತರ ವಿರೋಧಿಸಿ ರಾಮನಗರದಲ್ಲಿ ವೇದಿಕೆ ನಡೆಸುತ್ತಿರುವ ಹೋರಾಟಕ್ಕೆ ಹಾಗೂ ಸೆ.೮ರಂದು ಕರೆ ನೀಡಿರುವ ರಾಮನಗರ ಬಂದ್‌ಗೆ ಚನ್ನಪಟ್ಟಣ ತಾಲ್ಲೂಕು ಕನ್ನಡಪರ-ರೈತಪರ, ದಲಿತ ಪರ, ಪ್ರಗತಿಪರ ಸಂಘಟನೆಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿವೆ.
ಹೋರಾಟಕ್ಕೆ ಬೆಂಬಲ ನೀಡುವ ಬಗ್ಗೆ ಮತ್ತು ಚನ್ನಪಟ್ಟಣ ತಾಲ್ಲೂಕಿನಲ್ಲಿ ಹೋರಾಟದ ರೂಪುರೇಷೆ ಬಗ್ಗೆ ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಪೂರ್ವಬಾವಿ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿ, ರಾಮನಗರ ಜಿಲ್ಲಾ ಜನತೆಗೆ ಅನುಕೂಲ ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಹಿಂದಿನ ಸರ್ಕಾರದಲ್ಲಿ ಮಂಜೂರಾಗಿದ್ದ ಕೆಂಗಲ್ ಹನುಮಂತಯ್ಯ ಮೆಡಿಕಲ್ ಕಾಲೇಜನ್ನು ಅನುಷ್ಠಾನಕ್ಕೆ ತರುವ ಬದಲು ತಮ್ಮ ಸ್ವಹಿತಾಸಕ್ತಿಗಾಗಿ ಸ್ಥಳಾಂತರ ಮಾಡಲು ಮುಂದಾಗಿರುವುದು ಅವೈಜ್ಞಾನಿಕ ನಿರ್ಧಾರವಾಗಿದೆ. ಯಾವುದೇ ಕಾರಣಕ್ಕೂ ಈ ಕಾಲೇಜನ್ನು ಸ್ಥಳಾಂತರ ಮಾಡಬಾರದು. ಮೆಡಿಕಲ್ ಕಾಲೇಜು ಸ್ಥಳಾಂತರ ವಿರೋಧಿಸಿ ರಾಮನಗರ ಕೆಂಗಲ್ ಹನುಮಂತ್ಯಯ್ಯ ಮೆಡಿಕಲ್ ಕಾಲೇಜು ಸ್ಥಳಾಂತರ ವಿರೋಧಿ ಹೋರಾಟ ಸಮಿತಿ ಹೋರಾಟಕ್ಕೆ ಮುಂದಾಗಿದ್ದು ಈ ಹೋರಾಟಕ್ಕೆ ತಾಲ್ಲೂಕಿನ ಎಲ್ಲಾ ಪ್ರಗತಿಪರ ಸಂಘಟನೆಗಳು, ರೈತ ಪರ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ದಲಿತ ಪರ ಸಂಘಟನೆಗಳು, ಕಾರ್ಮಿಕ ಪರ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳು, ರಾಜಕೀಯ ಪಕ್ಷಗಳು ಪಕ್ಷಾತೀತವಾಗಿ ಭಾಗವಹಿಸಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸುವಂತೆ ಮನವಿ ಮಾಡಿಕೊಳ್ಳಲಾಯಿತು.
ಸೆ.೮ರಂದು ಕರೆ ನೀಡಿರುವ ರಾಮನಗರ ಬಂದ್ ಫಲಪ್ರದವಾಗದಿದ್ದರೆ, ಮುಂದಿನ ದಿನಗಳಲ್ಲಿ ಚನ್ನಪಟ್ಟಣ ಬಂದ್‌ಗೆ ಕರೆ ನೀಡುವುದು, ರಾಮನಗರ ಜಿಲ್ಲೆಯಲ್ಲಿ ಹೋರಾಟವನ್ನು ತೀವ್ರಗೊಳಿಸುವುದು ಜೊತೆಗೆ ರಾಮನಗರ-ಚನ್ನಪಟ್ಟಣದಿಂದ ನಿಯೋಗ ಹೋಗಿ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ವಸ್ತು ಸ್ಥಿತಿಯನ್ನು ಮನವರಿಕೆ ಮಾಡಿಕೊಡುವ ಕೆಲಸ ಮಾಡಲಾಗುವುದು ಎಂದು ರಾಜ್ಯ ರೈತ ಸಂಘದ ಪ್ರಾಂತೀಯ ಉಪಾಧ್ಯಕ್ಷರಾದ ಕೆ.ಮಲ್ಲಯ್ಯ ಮತ್ತು ಕಕಜವೇ ರಾಜ್ಯಾಧ್ಯಕ್ಷ ರಮೇಶ್‌ಗೌಡ ಅವರು ತಿಳಿಸಿದರು.
ರಾಮನಗರ ಕೆಂಗಲ್ ಹನುಮಂತಯ್ಯ ಮೆಡಿಕಲ್ ಕಾಲೇಜು ಪ್ರಾರಂಭವಾದರೆ, ರಾಮನಗರ ಹೆದ್ದಾರಿಯಲ್ಲಿದ್ದು, ಸಾರಿಗೆ, ರೈಲು ವ್ಯವಸ್ಥೆ ಮೂಲಭೂತ ಸೌಲಭ್ಯಗಳು ಉತ್ತಮವಾಗಿದ್ದು ಮದ್ದೂರು, ಕನಕಪುರ, ಮಾಗಡಿ, ಚನ್ನಪಟ್ಟಣ, ಕುಣಿಗಲ್ ತಾಲ್ಲೂಕಿನ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಸರ್ಕಾರ ಮೆಡಿಕಲ್ ಕಾಲೇಜು ಸ್ಥಳಾಂತರದ ನಿರ್ಧಾರವನ್ನು ಕೈಬಿಡಬೇಕು. ಒಂದು ವೇಳೆ ಉಪ ಮುಖ್ಯಮಂತ್ರಿಗಳಿಗೆ ಕನಕಪುರದಲ್ಲಿ ಮೆಡಿಕಲ್ ಕಾಲೇಜು ಪ್ರಾರಂಭ ಮಾಡುವ ಇಚ್ಚಾಸಕ್ತಿ ಇದ್ದರೆ ಅವರದೇ ಸರ್ಕಾರ ಇದ್ದು ಅವರೇ ಮತ್ತೊಂದು ಹೊಸ ಮೆಡಿಕಲ್ ಕಾಲೇಜನ್ನು ಮಂಜೂರು ಮಾಡಿಸಿಕೊಳ್ಳಲಿ ಸಂತೋಷ ಎಂದು ಅವರು ಅಭಿಪ್ರಾಯಿಸಿದ್ದಾರೆ.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗರೆಡ್ಡಿ,ಆರೋಗ್ಯ ಸಚಿವ ಶರವಣ ಪ್ರಕಾಶ್ ಪಾಟೀಲ ಅವರು ಈ ವೈದ್ಯಕೀಯ ಆಸ್ಪತ್ರೆಯನ್ನು ಸ್ಥಳಾಂತರ ಮಾಡಲಾಗುವುದು ಎಂದು ಹೇಳಿಕೆ ನೀಡಿದರೆ, ಸಂಸದ ಡಿ.ಕೆ.ಸುರೇಶ್ ಅವರು ದ್ವಂದ್ವ ಹೇಳಿಕೆ ನೀಡುತ್ತಿದ್ದಾರೆ. ಕ್ಷೇತ್ರದ ಶಾಸಕ ಇಕ್ಬಾಲ್ ಹುಸೇನ್ ಅವರು ಒಮ್ಮೆ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದರೆ, ಮತ್ತೊಮ್ಮೆ ಈ ವಿಚಾರ ಮುಗಿದ ಅಧ್ಯಾಯ. ಯಾವುದೇ ಕಾರಣಕ್ಕೂ ಈ ವೈದ್ಯಕೀಯ ಆಸ್ಪತ್ರೆಯನ್ನು ವರ್ಗಾಯಿಸುವುದಿಲ್ಲ ಎಂದು ಹೇಳಿ, ಜಿಲ್ಲೆಯ ಜನರ ದಿಕ್ಕನ್ನು ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಮೆಡಿಕಲ್ ಸ್ಥಳಾಂತರದ ಬಗ್ಗೆ ಸರ್ಕಾರ ಮತ್ತು ಸಚಿವರು ಸ್ಪಷ್ಟಪಡಿಸುವ ಮೂಲಕ ಎಲ್ಲಾ ಗೊಂದಲ, ಹೋರಾಟಕ್ಕೆ ತೆರೆ ಎಳೆಯುವ ಕೆಲಸ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಸಭೆಯಲ್ಲಿ ಹಿರಿಯ ಪತ್ರಕರ್ತ ಸು,ತ.ರಾಮೇಗೌಡ, ರಾಜ್ ಕಲಾ ಬಳಗದ ಅಧ್ಯಕ್ಷ ಎಲೇಕೇರಿ ಮಂಜುನಾಥ್, ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಎಂ.ಮಲವೇಗೌಡ, ಕಕಜವೇ ಜಿಲ್ಲಾಧ್ಯಕ್ಷ ಯೋಗೇಶ್‌ಗೌಡ, ಪದಾಧಿಕಾರಿಗಳಾದ ರಂಜಿತ್‌ಗೌಡ, ಕೃಷ್ಣೇಗೌಡ, ಭಾ.ವಿಪ ಪದಾಧಿಕಾರಿಗಳಾದ ವಸಂತಕುಮಾರ್, ಗುರುಮಾದಯ್ಯ, ರಮೇಶ್, ಶಿವಲಿಂಗಯ್ಯ, ಗಂಗಾಮತಸ್ಥರ ಸಂಘದ ಈಶ್ವರ್, ಮನೋಹರ್, ಚಿಕ್ಕಣ್ಣಪ್ಪ, ತಸ್ಮಿಯಾಬಾನು, ರೈತ ಸಂಘದ ರಾಜು, ತಾಲ್ಲೂಕು ಅಧ್ಯಕ್ಷ ರಾಮೇಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು.