ಬೆಂಗಳೂರು : ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ ಬಿಜೆಪಿ ಸರ್ಕಾರ ನೀಡಿದ ಅನುದಾನವನ್ನು ರದ್ದುಗೊಳಿಸಿದ ಕಾಂಗ್ರೆಸ್ ಸರ್ಕಾರದ ವಿರುದ್ಧ ಇಂದು ವಿಧಾನಸೌಧದ ಗಾಂಧೀಜಿ ಅವರ ಪ್ರತಿಮೆ ಎದುರು ಮೌನ ಪ್ರತಿಭಟನೆ ನಡೆಸುತ್ತಿದ್ದ ಕ್ಷೇತ್ರದ ಶಾಸಕ ಮುನಿರತ್ನಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸಾಥ್ ನೀಡಿದರು. ನಿಮ್ಮ ಬೆಂಬಲಕ್ಕೆ ನಾನಿದ್ದೇನೆ. ಈ ಬಗ್ಗೆ ಸರ್ಕಾರದ ಜೊತೆ ಮಾತನಾಡುತ್ತೇನೆ ಎಂದು ಶಾಸಕ ಮುನಿರತ್ನಗೆ ಬಿಎಸ್‌ವೈ ಭರವಸೆ ನೀಡಿದರು.
ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಬಿಎಸ್‌ವೈ, ಇದು ಮೇಲ್ನೋಟಕ್ಕೆ ದ್ವೇಷದ ರಾಜಕಾರಣ ಎಂದು ಗೊತ್ತಾಗಿದೆ. ಎಲ್ಲರಿಗೂ ಅನುದಾನ ಕೊಟ್ಟಂತೆ ಆರ್ ಆರ್ ನಗರಕ್ಕೂ ನೀಡಬೇಕು ಎಂದು ಹೇಳಿದರು. ಆರ್.ಆರ್.ನಗರ ಕ್ಷೇತ್ರಕ್ಕೆ ಅನುದಾನ ನೀಡುವ ಬಗ್ಗೆ ಸಿಎಂ ಹಾಗೂ ಡಿಸಿಎಂ ಜೊತೆ ನಾನು ಮಾತನಾಡುತ್ತೇನೆ. ಒಂದು ರೀತಿ ದ್ವೇಷದ ರಾಜಕಾರಣ ಆಗುತ್ತಿದೆ. ಎಲ್ಲ ಶಾಸಕರಿಗೂ ಅನುದಾನ ನೀಡಬೇಕು ಎಂದರು.
ಬಿಜೆಪಿ ಸರ್ಕಾರ ನೀಡಿದ ಅನುದಾನ ರದ್ದು ಮಾಡಿ ಸೇಡಿನ ರಾಜಕಾರಣ ಮಾಡಿದ್ದಾರೆ. ಈ ರೀತಿ ಮಾಡುವುದು ಸರಿಯಲ್ಲ. ಒಬ್ಬರೇ ಧರಣಿ ಮಾಡೋದು ಬೇಡ, ಮುನಿರತ್ನ ಜೊತೆ ನಾವೆಲ್ಲರೂ ಇದ್ದೇವೆ. ಧರಣಿ ಕೈಬಿಡಿ ಎಂದು ಮನವಿ ಮಾಡಿದ್ದೇನೆ ಎಂದು ಹೇಳಿದರು.
ಇಂದು ರಾಜರಾಜೇಶ್ವರಿ ಕ್ಷೇತ್ರಕ್ಕೆ ನಮ್ಮ ಬಿಜೆಪಿ ಸರ್ಕಾರ ನೀಡಿದ್ದ ಅನುದಾನ. ಕಾಂಗ್ರೆಸ್ ಸರ್ಕಾರ ಈ ಹಣ ದುರುಪಯೋಗ ಮಾಡಲು ಮುಂದಾಗಿದೆ.
ನಮ್ಮ ಸರ್ಕಾರದಲ್ಲಿ ಹಿಂದಿನ ಸರ್ಕಾರದಲ್ಲಿ ಬಿಡುಗಡೆ ಮಾಡಿದ್ದ ಅನುದಾನ ಬೇರೆ ಕಾರ್ಯಕ್ರಮಕ್ಕೆ ಬಳಸಿಕೊಂಡಿಲ್ಲ. ಆದರೆ, ಇವತ್ತು ಕಾಂಗ್ರೆಸ್ ನಮ್ಮ ಶಾಸಕರನ್ನು ಟಾರ್ಗೆಟ್ ಮಾಡುತ್ತಿದೆ. ಬೆಂಗಳೂರಿನ ಅಭಿವೃದ್ಧಿಗೆ ಡಿ.ಕೆ ಶಿವಕುಮಾರ್ ಬೆಂಬಲಿಸಬೇಕು. ಆದರೆ, ಡಿ.ಕೆ ಶಿವಕುಮಾರ್ ಬೆಂಗಳೂರು ಅಭಿವೃದ್ಧಿ ಕುಂಠಿತಗೊಳ್ಳುವಂತೆ ಮಾಡುತ್ತಿದ್ದಾರೆ. ಅಣ್ಣಾ ಮಂತ್ರಿ ಆಗಿದ್ದಾರೆ, ಡಿ.ಕೆ ಸುರೇಶ್ ಹಣ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಯಾವುದೇ ಕಾರಣಕ್ಕೂ ಅನುದಾನದ ಹಣ ಕಡಿತಗೊಳಿಸಬಾರದು ಎಂದು ಆಗ್ರಹಿಸಿದರು.
ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ೨೫ಕ್ಕೂ ಹೆಚ್ಚು ಪ್ರತಿಭಟನಾ ನಿರತರನ್ನು ಪೊಲೀಸರು ವಶಕ್ಕೆ ಪಡೆದರು. ಮುನಿರತ್ನ ಬೆಂಬಲಿಗರಿಗೆ ಪ್ರತಿಭಟನೆಗೆ ಅನುಮತಿ ಇಲ್ಲದ ಕಾರಣ ಪೊಲೀಸ್ ವಶಕ್ಕೆ ಪಡೆಯಲಾಯಿತು. ಶಾಸಕ ಮುನಿರತ್ನ ಹೊರತುಪಡಿಸಿ ಉಳಿದ ಎಲ್ಲಾ ಪ್ರತಿಭಟನಾ ನಿರತರನ್ನು ಪೊಲೀಸರು ವಶಕ್ಕೆ ಪಡೆದರು. ನಂತರ ಏಕಾಂಗಿಯಾಗಿ ಶಾಸಕ ಮುನಿರತ್ನ ಪ್ರತಿಭಟನೆ ಮುಂದುವರಿಸಿದರು.